ಗಡಿನಾಡ ಕನ್ನಡಿಗರಿಗೆ ಸಿಹಿ ಸುದ್ದಿ; ರೇಶನ್‌ ಕಾರ್ಡ್‌ ಕನ್ನಡದಲ್ಲಿ ಮುದ್ರಿಸಲು ಕೇರಳ ಸರಕಾರ ಆದೇಶ!

0
41
Advertisement

ಕಾಸರಗೋಡು, ನ.21: ಗಡಿನಾಡು ಕನ್ನಡಿಗರಿಗೆ ಅನುಕೂಲವಾಗುವಂತೆ ಕನ್ನಡಿಗರ ಪಡಿತರ ಚೀಟಿಯನ್ನು ಕನ್ನಡದಲ್ಲಿಯೇ ಮುದ್ರಿಸುವಂತೆ ಕೇರಳ ಸರಕಾರ ಆದೇಶಿಸಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ಕೇರಳ ರಾಜ್ಯದ ಗಡಿಭಾಗದಲ್ಲಿ ಭಾಷೆಯ ಚರ್ಚೆ ನಡೆಯುತ್ತಿರುವಾಗಲೇ ಇಂತಹ ಬೆಳವಣಿಗೆಯಿಂದ ಗಡಿನಾಡು ಕನ್ನಡಿಗರಿಗೆ ಸರಕಾರದ ಬೆಂಬಲ ದೊರೆತಂತಿದೆ.

ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸಹಿತ ಎಲ್ಲಾ ದಾಖಲೆಗಳನ್ನು ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗಿತ್ತು. ಇದರಿಂದ ಗಡಿಭಾಗದ ಕನ್ನಡಿಗರು ಭಾಷಾ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತಿದ್ದರು.

ಸ್ಥಳೀಯ ಭಾಷಾ ಅಲ್ಪಸಂಖ್ಯಾತರ ಸಂಕಷ್ಟವನ್ನು ಗಮನಿಸಿ ರೇಶನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸುವಾಗ ಕನ್ನಡ ಭಾಷೆಯನ್ನು ಅಳವಡಿಸುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇನಮರದ, ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ. ಎಂ. ಅಶ್ರಫ್, ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅದರಂತೆ ಕೇರಳ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಈ ಬಗ್ಗೆ ಕ್ರಮ ಕೈಗೊಳ್ಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಿಗೆ ಸೂಚನೆ ನೀಡಿರುತ್ತಾರೆ ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

LEAVE A REPLY

Please enter your comment!
Please enter your name here