‘ನಮ್ಮ ಭಾಷೆ ನಮ್ಮ ಕನ್ನಡ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ, ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರದರ್ಶಿಸಲು ಸರ್ಕಾರ ಮುಂದಾಗಲಿ: ಹಂಪ ನಾಗರಾಜಯ್ಯ

0
3

ಬೆಂಗಳೂರು, ಜೂ.12: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ಜನ್ಮದಿನದ ಅಂಗವಾಗಿ ‘ನಮ್ಮ ಭಾಷೆ ನಮ್ಮ ಕನ್ನಡ’ ಮಕ್ಕಳ ಚಲನಚಿತ್ರದ ವಿಶೇಷ ಪ್ರದರ್ಶನ ಶುಕ್ರವಾರ ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ರೇಣುಕಾಂಬಾ ಸ್ಟುಡಿಯೋದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಮಾತನಾಡಿ, ‘ನಮ್ಮ ಭಾಷೆ ನಮ್ಮ ಕನ್ನಡ’ ಚಿತ್ರವು ಕನ್ನಡಿಗರ ಭಾವನೆಗಳನ್ನು ಅತ್ಯಂತ ನೈಜವಾಗಿ ತೆರೆಯ ಮೇಲೆ ಮೂಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ರಾಜ್ಯದ ಗ್ರಾಮ-ನಗರಗಳಲ್ಲೆಲ್ಲ ಪ್ರದರ್ಶನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಚಿತ್ರವನ್ನು ಜನಸಾಮಾನ್ಯರ ಬಳಿಗೆ ತಲುಪಿಸಲು ವಿಶೇಷ ನಿಯೋಗವೊಂದನ್ನು ರಚಿಸಬೇಕು. ಅದಕ್ಕೆ ತಾವು ಸಹ ಕೈಜೋಡಿಸಲು ಸಿದ್ಧ ಎಂದು ತಿಳಿಸಿದರು.

“ನಾವು ಇತರ ಭಾಷೆಗಳನ್ನು ದ್ವೇಷಿಸುವುದಿಲ್ಲ. ಆದರೆ ಕನ್ನಡವೇ ಮುಖ್ಯ ಭಾಷೆಯಾಗಿ ಎಲ್ಲರೂ ಕಲಿಯುವಂತಾಗಬೇಕು. ಅದರ ಜೊತೆಗೆ ಇತರ ಭಾಷೆಗಳನ್ನೂ ಕಲಿಯಬಹುದು. ಕನ್ನಡದ ಬಗ್ಗೆ ಇರುವ ಭಾವನೆಗಳನ್ನು ಈ ಚಿತ್ರ ಪರಿಣಾಮಕಾರಿಯಾಗಿ ಬಿಂಬಿಸಿದೆ” ಎಂದು ಹಂಪ ನಾಗರಾಜಯ್ಯ ಹೇಳಿದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ದತ್ತಣ್ಣ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರ, ಪುರುಷೋತ್ತಮ ಬಿಳಿಮಲೆ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಎಸ್.ಜಿ. ಸಿದ್ದರಾಮಯ್ಯ ಮಾಜಿ ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರ, ಸಾ.ರಾ.ಗೋವಿಂದು ಮಾಜಿ ಅಧ್ಯಕ್ಷರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸೇರಿದಂತೆ ಹಲವಾರು ಗಣ್ಯರು ಕನ್ನಡಾಭಿಮಾನಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಆಹ್ವಾನಿತರು ಭಾಗವಹಿಸಿ ಚಿತ್ರ ವೀಕ್ಷಿಸಿದರು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಾಭಿಮಾನವನ್ನು ಮಕ್ಕಳ ಮನಸ್ಸಿನಲ್ಲಿ ಬೆಳೆಸುವ ಉದ್ದೇಶದ ಈ ಚಲನಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here