ಸರ್ಕಾರವೇ ಮದ್ಯ ಮಾರಾಟ ನಡೆಸಲಿ: ಬಳ್ಳಾರಿಯಿಂದ ರಾಜ್ಯ ಸರ್ಕಾರಕ್ಕೆ ನೀತಿ ಪ್ರಸ್ತಾವನೆ

0
4

ಬಳ್ಳಾರಿ, ಜು.18: ರಾಜ್ಯದಲ್ಲಿ ಖಾಸಗಿ ಮದ್ಯ ಮಾರಾಟ ವ್ಯವಸ್ಥೆಗೆ ಪರ್ಯಾಯವಾಗಿ ಸರ್ಕಾರವೇ ನೇರವಾಗಿ ಮದ್ಯ ಮಾರಾಟ ನಡೆಸುವ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿ, ಪ್ರಶ್ನೆ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ವಕೀಲ ಅರುಣ್ ಭೂಪಾಲ್ ಅವರು ರಾಜ್ಯ ಅಬಕಾರಿ ಸಚಿವರಿಗೆ ಸಮಗ್ರ ನೀತಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಆಂಧ್ರ ಪ್ರದೇಶ ಮಾದರಿಯನ್ನು ಅನುಸರಿಸಿ ಸರ್ಕಾರವೇ ಮದ್ಯ ಮಾರಾಟದ ಸಂಪೂರ್ಣ ಹೊಣೆ ವಹಿಸಿದರೆ ರಾಜ್ಯದ ಆದಾಯದಲ್ಲಿ ಗಣನೀಯ ಏರಿಕೆಯಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಖಾಸಗಿ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಬರಬೇಕಾದ ಆದಾಯದ ದೊಡ್ಡ ಭಾಗ ಖಾಸಗಿ ವಲಯಕ್ಕೆ ಹರಿಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮನವಿಯ ಪ್ರಕಾರ, ರಾಜ್ಯ ಸರ್ಕಾರಕ್ಕೆ ಈಗ ವಾರ್ಷಿಕವಾಗಿ ಸುಮಾರು ₹30,000ರಿಂದ ₹40,000 ಕೋಟಿ ಅಬಕಾರಿ ಆದಾಯ ದೊರೆಯುತ್ತಿದ್ದು, ರಾಜ್ಯದ ಒಟ್ಟು ಮದ್ಯ ಮಾರುಕಟ್ಟೆ ಮೌಲ್ಯ ₹70,000ರಿಂದ ₹80,000 ಕೋಟಿಗಳಷ್ಟಿದೆ. ಸರ್ಕಾರವೇ ನೇರವಾಗಿ ಮದ್ಯ ಮಾರಾಟ ನಡೆಸಿದರೆ ವಾರ್ಷಿಕ ಆದಾಯ ₹45,000ರಿಂದ ₹55,000 ಕೋಟಿವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಹೆಚ್ಚುವರಿಯಾಗಿ ₹10,000ರಿಂದ ₹15,000 ಕೋಟಿ ಆದಾಯ ಲಭಿಸಬಹುದು ಎಂದು ಅಂದಾಜಿಸಲಾಗಿದೆ.

ಗಣಿ ಹಾಗೂ ಕಾರ್ಮಿಕ ಆಧಾರಿತ ಪ್ರದೇಶವಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಮದ್ಯ ಮಾರಾಟದ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ, ಸರ್ಕಾರದ ನೇರ ನಿಯಂತ್ರಣದ ಪೈಲಟ್ ಯೋಜನೆಯನ್ನು ಮೊದಲಿಗೆ ಇದೇ ಜಿಲ್ಲೆಯಲ್ಲಿ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಮುಖ ಬೇಡಿಕೆಗಳು:

  • ಬಳ್ಳಾರಿ ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಘೋಷಿಸುವುದು.
  • ಸರ್ಕಾರದ ಮಾಲೀಕತ್ವದ ಮದ್ಯ ಅಂಗಡಿಗಳು ಹಾಗೂ ಬಾರ್‌ಗಳನ್ನು ಆರಂಭಿಸುವುದು.
  • ಖಾಸಗಿ ಮದ್ಯ ಮಾರಾಟ ಪರವಾನಗಿಗಳನ್ನು ಹಂತ ಹಂತವಾಗಿ ಮರುಪರಿಶೀಲಿಸುವುದು ಅಥವಾ ರದ್ದುಪಡಿಸುವುದು.
  • ರಾಜ್ಯ ಮಟ್ಟದ ಬೆವರೇಜ್ ಕಾರ್ಪೊರೇಷನ್ ಮೂಲಕ ಮದ್ಯ ಮಾರಾಟ ವ್ಯವಸ್ಥೆ ನಿರ್ವಹಿಸುವುದು.
  • ಸಂಪೂರ್ಣ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆ ಜಾರಿಗೊಳಿಸುವುದು.

“ಆಂದ್ರಪ್ರದೇಶದಲ್ಲಿ ಪ್ರತಿವರ್ಷ ಮದ್ಯ ಮಾರಾಟ ಟೆಂಡರ್ ಅಥವಾ ಚೀಟಿ ಎತ್ತಿ ಪರವಾನಿಗೆಯನ್ನು ಬೇರೆ‌ ಯವರಿಗೆ ಹಸ್ತಾಂತರಿಸ ಲಾಗುವುದು‌ ಇಂತಹ ಕಾನೂನನ್ನು ಏಕೆ ಕರ್ನಾಟಕದಲ್ಲಕ ಏಕೆ ತರಬಾರದು..?”

-ಅರುಣ್ ಭೂಪಾಲ್,
ವಕೀಲರು, ಸಂಸ್ಥಪಾಕರು,
ಪ್ರಶ್ನೆ ಫೌಂಡೇಷನ್, ಬಳ್ಳಾರಿ

ಸರ್ಕಾರದ ನೇರ ನಿಯಂತ್ರಣದಿಂದ ಮದ್ಯದ ಬೆಲೆ, ಗುಣಮಟ್ಟ ಹಾಗೂ ಮಾರಾಟ ಸಮಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುವುದಲ್ಲದೆ, ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಸಹ ನೆರವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವ್ಯವಸ್ಥೆಯಿಂದ ಸರ್ಕಾರಕ್ಕೆ ಹೆಚ್ಚುವರಿ ಆಡಳಿತಾತ್ಮಕ ಹೊರೆ, ಸಿಬ್ಬಂದಿ ನೇಮಕಾತಿ, ಮೂಲಸೌಕರ್ಯ ವೆಚ್ಚ ಹಾಗೂ ಕಳ್ಳಬಜಾರ್ ಮತ್ತು ಭ್ರಷ್ಟಾಚಾರದಂತಹ ಸವಾಲುಗಳು ಎದುರಾಗುವ ಸಾಧ್ಯತೆಯನ್ನೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಗೊಳಿಸುವ ಮುನ್ನ ಬಳ್ಳಾರಿ ಸೇರಿದಂತೆ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪೈಲಟ್ ಯೋಜನೆ ಅನುಷ್ಠಾನಗೊಳಿಸಿ, ಅದರ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ನೀತಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

LEAVE A REPLY

Please enter your comment!
Please enter your name here