ಅಧಿಕಾರ ದುರುಪಯೋಗ ಆರೋಪದ ಹಿನ್ನೆಲೆ; ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಅಮಾನತು!

0
7

ಬೆಂಗಳೂರು, ಜು.13: ಸ್ವಜನ ಪಕ್ಷಪಾತ, ಹಿತಾಸಕ್ತಿ ಸಂಘರ್ಷ ಮತ್ತು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸದೇ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕರ್ ಅವರನ್ನು ರಾಜ್ಯಪಾಲರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರ ಕಚೇರಿ ಮಹತ್ವದ ಆದೇಶ ಹೊರಡಿಸಿದೆ.

ಶಿವಶಂಕರಪ್ಪ ಸಾಹುಕರ್ ಅವರು ತಮ್ಮ ಇಬ್ಬರು ಪುತ್ರಿಯರಿಗೆ ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಭಾರತದ ಸಂವಿಧಾನದ 317(1)ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ.

ಆದೇಶದ ಪ್ರಕಾರ, ಕೆಪಿಎಸ್‌ಸಿ ಅಧ್ಯಕ್ಷರ ನೇರ ಅವಲಂಬಿತರು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ, ಹಿತಾಸಕ್ತಿ ಸಂಘರ್ಷವನ್ನು ಘೋಷಿಸದೇ ಹಾಗೂ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿಯದೇ ಶಿವಶಂಕರಪ್ಪ ಸಾಹುಕರ್ ಕರ್ತವ್ಯಲೋಪ ಎಸಗಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ.

ಅಲ್ಲದೆ, ಅಧ್ಯಕ್ಷರ ಪುತ್ರಿಯೊಬ್ಬರು ಕುಟುಂಬದ ವಾರ್ಷಿಕ ಆದಾಯ ಕೇವಲ ₹40 ಸಾವಿರ ಎಂದು ಘೋಷಿಸಿ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಾಸ್ತವದಲ್ಲಿ ಕುಟುಂಬದ ಆದಾಯ ನಿಗದಿತ ಮಿತಿಗಿಂತ ಹೆಚ್ಚಿದ್ದರೂ, ಕಡಿಮೆ ಆದಾಯದ ಮಾಹಿತಿ ನೀಡಿ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ‘ಕ್ರೀಮಿ ಲೇಯರ್’ ವಿನಾಯಿತಿ ಪಡೆಯಲು ಪ್ರಯತ್ನಿಸಿರುವ ಆರೋಪವೂ ಕೇಳಿಬಂದಿದೆ.

2002ರ ಮಾರ್ಚ್ 30ರ ಸರ್ಕಾರಿ ಆದೇಶದ ಪ್ರಕಾರ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಮೀಸಲಾತಿ ಪಡೆಯಲು ಅರ್ಹರಲ್ಲ. ಆದರೂ ಈ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ನಿಯಮ ಉಲ್ಲಂಘಿಸಿ ಲಾಭ ಪಡೆಯಲು ಯತ್ನಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಧ್ಯಕ್ಷರು ಸಲ್ಲಿಸಿರುವ ಆದಾಯ, ಆಸ್ತಿ ವಿವರಗಳು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದಾಗ, ಅವರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಇದು ದುರ್ನಡತೆಗೆ ಸಮಾನವಾಗಿದೆ ಎಂದು ರಾಜ್ಯಪಾಲರ ಕಚೇರಿ ಅಭಿಪ್ರಾಯಪಟ್ಟಿದೆ.

ಕೆಪಿಎಸ್‌ಸಿಯ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಮತ್ತು ನ್ಯಾಯಯುತ, ನಿಷ್ಪಕ್ಷಪಾತ ತನಿಖೆ ನಡೆಯುವಂತೆ ನೋಡಿಕೊಳ್ಳಲು ರಾಷ್ಟ್ರಪತಿಯವರ ಮುಂದಿನ ಆದೇಶದವರೆಗೆ ಶಿವಶಂಕರಪ್ಪ ಸಾಹುಕರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

LEAVE A REPLY

Please enter your comment!
Please enter your name here