ಗಾಮಿನಿ: ಪ್ರೀತಿ, ವಿಧಿ ಮತ್ತು ಜೀವನದ ಒಳಹರಿವಿನ ಕಥೆ

0
5

ಪುಸ್ತಕ ವಿಮರ್ಶೆ: ಅಕ್ಷತಾ ಕೊಪ್ಪಳ

ಪುಸ್ತಕ: ಗಾಮಿನಿ – ಒಳಗೊಳಗೆ ಹರಿಯುವಳು
ಲೇಖಕರು: ಶಿವರಾಜ್ ಯಾದವ್ ಜಿ. ಎಲ್.
ಪುಟಗಳು: 120

“ನೈಜ ಘಟನೆ ಆಧಾರಿತ ಕಾದಂಬರಿ” ಎಂಬ ಸಾಲು ಪುಸ್ತಕದ ಮುಖಪುಟದಲ್ಲೇ ಓದುಗರ ಕುತೂಹಲವನ್ನು ಕೆರಳಿಸುತ್ತದೆ. ಆ ಕುತೂಹಲದಿಂದ ಕೈಗೆತ್ತಿಕೊಂಡ ಗಾಮಿನಿ ಮೊದಲ ಪುಟದಿಂದಲೇ ಓದುಗರನ್ನು ತನ್ನೊಳಗೆ ಸೆಳೆದುಕೊಂಡು, ಕೊನೆಯ ಪುಟದವರೆಗೆ ಬಿಡದೆ ಓದಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಕಾದಂಬರಿಯ ಓದಿನುದ್ದಕ್ಕೂ ಇದು ನಮ್ಮ ಸುತ್ತಮುತ್ತ ನಡೆದಿರಬಹುದಾದ ಅಥವಾ ಯಾರೋ ಪರಿಚಿತರ ಜೀವನದಲ್ಲಿ ನಡೆದ ಕಥೆಯೇನೋ ಎಂಬ ಭಾವನೆ ಮೂಡುತ್ತದೆ.

‘ಗಾಮಿನಿ’ ಎಂದರೆ ಹರಿಯುವವಳು. ಈ ಶೀರ್ಷಿಕೆಯಂತೆ ಕಾದಂಬರಿಯ ಕಥೆಯೂ ಜೀವನದ ಏರಿಳಿತಗಳ ನಡುವೆ ನಿರಂತರವಾಗಿ ಹರಿಯುತ್ತ ಸಾಗುತ್ತದೆ. ಕಥಾನಾಯಕ ಹೇಮಂತ್ ವೈದ್ಯನಾಗುವ ಕನಸನ್ನು ಹೊತ್ತವನಾಗಿದ್ದರೂ, ಪಿಯುಸಿಯಲ್ಲಿ ಅನುತ್ತೀರ್ಣನಾಗುವುದರಿಂದ ವೈದ್ಯಕೀಯ ಸೀಟು ಅವನ ಕೈತಪ್ಪುತ್ತದೆ. ಆದರೆ ಕನಸನ್ನು ಕೈಬಿಡದೆ ವೈದ್ಯಕೀಯ ಕ್ಷೇತ್ರದಲ್ಲೇ ಅರೆ ವೈದ್ಯಕೀಯ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಮತ್ತೊಂದೆಡೆ, ಉತ್ತರ ಕರ್ನಾಟಕದ ಬೆಳಗಾವಿಯ ಮೂಲದ ಪ್ರಣವಿ, ತಂದೆಯ ಉದ್ಯೋಗದ ಕಾರಣದಿಂದ ಕೂಡ್ಲಿಗಿಯಲ್ಲಿ ನೆಲೆಸಿದ್ದು, ಅದೇ ಕಾಲೇಜಿನಲ್ಲಿ ವ್ಯಾಸಂಗ ಆರಂಭಿಸುತ್ತಾಳೆ.

ಕಾಲೇಜಿನ ಸ್ನೇಹ ನಿಧಾನವಾಗಿ ಪ್ರೀತಿಯಾಗಿ ಬೆಳೆಯುತ್ತದೆ. ಆದರೆ ಅವರ ಪ್ರೀತಿಯ ದಾರಿಯಲ್ಲಿ ಜಾತಿ, ಹಣ, ಸಾಮಾಜಿಕ ಅಂತಸ್ತು ಮತ್ತು ಕುಟುಂಬದ ಗೌರವದಂತಹ ಅಡೆತಡೆಗಳು ಎದುರಾಗುತ್ತವೆ. ಈ ಎಲ್ಲ ಸವಾಲುಗಳನ್ನು ಮೀರಿ ಹೇಮಂತ್ ಮತ್ತು ಪ್ರಣವಿ ಒಂದಾಗುತ್ತಾರೆಯೇ ಎಂಬ ಕುತೂಹಲ ಓದುಗರನ್ನು ಕೊನೆಯ ಪುಟದವರೆಗೂ ಕರೆದೊಯ್ಯುತ್ತದೆ.

ಇದರ ನಡುವೆ ಕಥೆಗೆ ಭಾರ್ಗವರಾಮ ಮತ್ತು ಕನಕವತಿ ಎಂಬ ಪಾತ್ರಗಳ ಪ್ರವೇಶವಾಗುತ್ತದೆ. ಈ ಇಬ್ಬರಿಗೂ ಹೇಮಂತ್–ಪ್ರಣವಿ ಬದುಕಿಗೂ ಇರುವ ಸಂಬಂಧವೇನು? ಕಥೆಯ ತಿರುವುಗಳು ಯಾವ ದಿಕ್ಕಿಗೆ ಸಾಗುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ಗಾಮಿನಿಯನ್ನು ಓದಲೇಬೇಕು.

ಈ ಕಾದಂಬರಿ ಕೇವಲ ಪ್ರೇಮಕಥೆಯಲ್ಲ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ವ್ಯವಸ್ಥೆ, ಆರ್ಥಿಕ ಅಸಮಾನತೆ, ಸಾಮಾಜಿಕ ಅಂತಸ್ತು ಹಾಗೂ ಕುಟುಂಬದ ನಿರೀಕ್ಷೆಗಳಂತಹ ಸೂಕ್ಷ್ಮ ವಿಚಾರಗಳನ್ನು ಲೇಖಕರು ಸರಳವಾಗಿ, ಆದರೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಪ್ರೀತಿಗಿಂತ ಜಾತಿ, ಹಣ ಮತ್ತು ಗೌರವವನ್ನು ದೊಡ್ಡದಾಗಿ ನೋಡುವ ಮನಸ್ಥಿತಿಯು ಎಷ್ಟೋ ಬದುಕುಗಳನ್ನು ಕಸಿದುಕೊಳ್ಳುತ್ತಿದೆ ಎಂಬುದನ್ನು ಕಾದಂಬರಿ ಮನಮುಟ್ಟುವ ರೀತಿಯಲ್ಲಿ ಹೇಳುತ್ತದೆ.

ಲೇಖಕರು ನೇರವಾಗಿ ಬೋಧಿಸದೆ, ಪಾತ್ರಗಳ ಬದುಕಿನ ಮೂಲಕ ಮಹತ್ವದ ಸಂದೇಶವೊಂದನ್ನು ನೀಡುತ್ತಾರೆ. ಪ್ರೀತಿ ಜೀವನದ ಅಮೂಲ್ಯ ಅನುಭವ. ಆದರೆ ಪ್ರೀತಿಯ ಹೆಸರಿನಲ್ಲಿ ತಂದೆ-ತಾಯಿಯ ಮನಸ್ಸಿಗೆ ನೋವುಂಟು ಮಾಡುವ ಅಥವಾ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಾವತ್ತೂ ಪರಿಹಾರವಲ್ಲ. ನಿಜವಾದ ಪ್ರೀತಿ ಇದ್ದರೆ ಕುಟುಂಬದವರ ವಿಶ್ವಾಸ ಗಳಿಸಿ, ಅವರ ಆಶೀರ್ವಾದದೊಂದಿಗೆ ಜೀವನ ಕಟ್ಟಿಕೊಳ್ಳಬೇಕು ಎಂಬ ಸಂದೇಶ ಕಥೆಯ ಅಂತಃಸಾರವಾಗಿದೆ.

ಅದೇ ರೀತಿ, ಪ್ರೀತಿ ಸಿಗಲಿಲ್ಲವೆಂಬ ಕಾರಣಕ್ಕೆ ಜೀವನವನ್ನೇ ತ್ಯಜಿಸುವಂತಹ ತಪ್ಪು ನಿರ್ಧಾರಗಳ ವಿರುದ್ಧವೂ ಕಾದಂಬರಿ ಎಚ್ಚರಿಕೆ ನೀಡುತ್ತದೆ. ಕೆಲವೇ ವರ್ಷಗಳ ಪ್ರೀತಿಯನ್ನು ಮರೆಯಲು ಕಷ್ಟವಾಗುವ ನಮಗೆ, ಜನ್ಮ ನೀಡಿದ ತಂದೆ-ತಾಯಿಯ ನೋವು ಎಷ್ಟಿರಬಹುದು ಎಂಬ ಪ್ರಶ್ನೆಯನ್ನು ಓದುಗರ ಮನಸ್ಸಿನಲ್ಲಿ ಮೂಡಿಸುತ್ತದೆ.

ಕೊನೆಯಲ್ಲಿ “ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ” ಎಂಬ ಭಾರತೀಯ ತತ್ವವನ್ನು ನೆನಪಿಸುವ ಕಾದಂಬರಿ, ನಮ್ಮದಾಗಬೇಕಾದದ್ದು ಕಾಲ ಬಂದಾಗ ನಮ್ಮದಾಗಿಯೇ ತೀರುತ್ತದೆ; ನಮ್ಮದಲ್ಲದದ್ದು ಎಂದಿಗೂ ನಮ್ಮದಾಗುವುದಿಲ್ಲ ಎಂಬ ಜೀವನಸತ್ಯವನ್ನು ಸೂಕ್ಷ್ಮವಾಗಿ ಸಾರುತ್ತದೆ.

ಒಟ್ಟಾರೆಯಾಗಿ ಗಾಮಿನಿ ಪ್ರೀತಿ, ಕುಟುಂಬ, ಸಮಾಜ ಮತ್ತು ಜೀವನದ ಮೌಲ್ಯಗಳನ್ನು ಒಳಗೊಳಗೆ ಹರಿಯುವ ಭಾವನಾತ್ಮಕ ಕಥೆಯ ಮೂಲಕ ಓದುಗರಿಗೆ ತಲುಪಿಸುವ ಕಾದಂಬರಿ. ಸರಳ ಭಾಷೆ, ನೈಜ ಬದುಕಿನ ಘಟನೆಗಳನ್ನು ನೆನಪಿಸುವ ಕಥಾವಸ್ತು ಹಾಗೂ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ನಿರೂಪಣೆಯೇ ಈ ಕೃತಿಯ ಪ್ರಮುಖ ಶಕ್ತಿಗಳು. ಪ್ರೇಮಕಥೆಗಳನ್ನು ಇಷ್ಟಪಡುವವರಷ್ಟೇ ಅಲ್ಲ, ಬದುಕಿನ ಮೌಲ್ಯಗಳ ಕುರಿತು ಯೋಚಿಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಯಾಗಿದೆ ಗಾಮಿನಿ.

LEAVE A REPLY

Please enter your comment!
Please enter your name here