ಸೆ.1ರಿಂದ ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್‌ಗೆ ಸಂಪೂರ್ಣ ನಿಷೇಧ!
ಚೆನ್ನೈ, ಆ.10: ದೇವಾಲಯಗಳ ಪಾವಿತ್ರ್ಯ ಕಾಪಾಡುವುದು ಹಾಗೂ ಭಕ್ತರ ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 1ರಿಂದ ರಾಜ್ಯದ ಎಲ್ಲಾ ದೇವಾಲಯಗಳ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.
ಇತ್ತೀಚಿನ ದಿನಗಳಲ್ಲಿ ದೇವಾಲಯಗಳ ಗರ್ಭಗುಡಿ ಹಾಗೂ ದೇವರ ವಿಗ್ರಹಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ದೇವಾಲಯಗಳ ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆಯಾಗುವುದರ ಜತೆಗೆ, ಇತರ ಭಕ್ತರ ದರ್ಶನಕ್ಕೂ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮೊಬೈಲ್ ಜಮಾ ಮಾಡಲು ಕೌಂಟರ್
ಹೊಸ ನಿಯಮದಂತೆ, ಸೆಪ್ಟೆಂಬರ್ 1ರೊಳಗೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರವೇಶ ದ್ವಾರ ಅಥವಾ ಪಾದರಕ್ಷೆ ಇಡುವ ಸ್ಥಳದ ಸಮೀಪ ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿ ಜಮಾ ಮಾಡಲು ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಭಕ್ತರು ಪ್ರತಿ ಮೊಬೈಲ್‌ಗೆ ₹5 ಶುಲ್ಕ ಪಾವತಿಸಿ ತಮ್ಮ ಫೋನ್‌ಗಳನ್ನು ಕೌಂಟರ್‌ನಲ್ಲಿ ಜಮಾ ಮಾಡಬಹುದಾಗಿದೆ.
ಮೊಬೈಲ್ ಸ್ವೀಕರಿಸಿದ ಬಳಿಕ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಮೂಲಕ ಭಕ್ತರಿಗೆ ಅಧಿಕೃತ ರಸೀದಿ ನೀಡಲಾಗುತ್ತದೆ. ದರ್ಶನ ಮುಗಿದ ಬಳಿಕ ರಸೀದಿ ತೋರಿಸಿ ತಮ್ಮ ಮೊಬೈಲ್‌ಗಳನ್ನು ಮರಳಿ ಪಡೆಯಬಹುದಾಗಿದೆ.
ಗಣ್ಯರಿಗೂ ಅನ್ವಯ
ಸರ್ಕಾರದ ಈ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯವಾಗಲಿದೆ. ರಾಜಕಾರಣಿಗಳು, ಚಲನಚಿತ್ರ ನಟ-ನಟಿಯರು ಸೇರಿದಂತೆ ಗಣ್ಯರು ಹಾಗೂ ಪ್ರಭಾವಿ ವ್ಯಕ್ತಿಗಳು ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಮೊಬೈಲ್ ಮೂಲಕ ಫೋಟೊ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ.
ದೇವಾಲಯಗಳ ಪಾವಿತ್ರ್ಯ, ಶಿಸ್ತು ಹಾಗೂ ಭಕ್ತರಿಗೆ ಶಾಂತಿಯುತ ದರ್ಶನಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದೆ.




