ಬೆಂಗಳೂರು, ಆ.07: ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮಗಳಿಗೆ ತಡೆ ಹಾಕಲು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ದಾಖಲಾತಿ ವೇಳೆ ಪೋಷಕರಿಂದ ಕಾನೂನುಬಾಹಿರವಾಗಿ ಡೊನೇಷನ್ ಅಥವಾ ಹೆಚ್ಚುವರಿ ಹಣ ವಸೂಲಿ ಮಾಡಿದರೆ, ಪಡೆದ ಮೊತ್ತದ 10 ಪಟ್ಟು ದಂಡ ವಿಧಿಸುವುದಾಗಿ ಇಲಾಖೆ ಸ್ಪಷ್ಟಪಡಿಸಿದೆ.
2025-26ನೇ ಶೈಕ್ಷಣಿಕ ಸಾಲಿನ ದಾಖಲಾತಿ ಹಾಗೂ ಶುಲ್ಕ ವಸೂಲಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಪ್ರತಿ ಖಾಸಗಿ ಶಾಲೆಯೂ ತಾವು ನಿಗದಿಪಡಿಸಿರುವ ಶುಲ್ಕದ ಸಂಪೂರ್ಣ ವಿವರಗಳನ್ನು ತಮ್ಮ ಅಧಿಕೃತ ವೆಬ್‌ಸೈಟ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ. ಈ ಕ್ರಮದ ಮೂಲಕ ಶುಲ್ಕ ವಸೂಲಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಇಲಾಖೆ ಮುಂದಾಗಿದೆ.
ಇದಲ್ಲದೆ, ಶಾಲೆಯಲ್ಲಿ ಪ್ರವೇಶ ನೀಡುವ ಮುನ್ನ ಮಕ್ಕಳಿಗೆ ಅಥವಾ ಪೋಷಕರಿಗೆ ಯಾವುದೇ ರೀತಿಯ ಪರೀಕ್ಷೆ ಅಥವಾ ಸಂದರ್ಶನ ನಡೆಸಿದರೆ ಸಂಬಂಧಿಸಿದ ಶಾಲೆಗೆ ₹25,000 ದಂಡ ವಿಧಿಸಲಾಗುತ್ತದೆ. ಇದೇ ತಪ್ಪು ಮರುಕಳಿಸಿದರೆ ಪ್ರತಿ ಬಾರಿ ₹50,000 ದಂಡ ವಿಧಿಸುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಖಾಸಗಿ ಶಾಲೆಗಳ ದಾಖಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಅಕ್ರಮ ಶುಲ್ಕ ವಸೂಲಿ ಹಾಗೂ ಡೊನೇಷನ್ ಪದ್ಧತಿಗೆ ಕಡಿವಾಣ ಹಾಕುವುದು ಮತ್ತು ಪೋಷಕರ ಹಿತಾಸಕ್ತಿ ಕಾಪಾಡುವುದು ಈ ಹೊಸ ನಿಯಮಗಳ ಪ್ರಮುಖ ಉದ್ದೇಶವಾಗಿದೆ.




