ವಿವಾದಾತ್ಮಕ ಹೇಳಿಕೆ ಪ್ರಕರಣ: ತಮಿಳುನಾಡು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ!

0
2

ಚೆನ್ನೈ, ಆ.04: ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕ ಹಾಗೂ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ತಮಿಳುನಾಡು ಪೊಲೀಸರು ಇಂದು ಬೆಳಗ್ಗೆ ಚೆನ್ನೈನ ನೀಲಂಕರೈಯಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ನೀಡಿದ ಭಾಷಣದಲ್ಲಿ ನಟಿ ತ್ರಿಷಾ ಕೃಷ್ಣನ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಉದ್ದೇಶಿಸಿ ಅವಹೇಳನಕಾರಿ, ಲಿಂಗ ತಾರತಮ್ಯ ಸೂಚಿಸುವ ಹಾಗೂ ದ್ವಂದ್ವಾರ್ಥದ ಹೇಳಿಕೆಗಳನ್ನು ನೀಡಿದ ಆರೋಪ ಕೇಳಿಬಂದಿತ್ತು. ಈ ಭಾಷಣದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಭಾಷಣವು ಅಶ್ಲೀಲ ಹಾಗೂ ಅಸಭ್ಯ ಪದಪ್ರಯೋಗಗಳಿಂದ ಕೂಡಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ತಂಜಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆಗಾಗಿ ತಂಜಾವೂರಿನ ಪೊಲೀಸ್ ತಂಡ ಮಂಗಳವಾರ ಬೆಳಿಗ್ಗೆ ಚೆನ್ನೈನ ನೀಲಂಕರೈ ನಿವಾಸಕ್ಕೆ ತೆರಳಿ ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಅವರನ್ನು ತಂಜಾವೂರಿಗೆ ಕರೆದೊಯ್ಯಲಾಗಿದೆ.

ಬಂಧನದ ಸಾಧ್ಯತೆಯನ್ನು ಮುಂಚಿತವಾಗಿ ಊಹಿಸಿದ್ದ ಡಿಎಂಕೆ ಪಕ್ಷವು ಬಂಧನದಿಂದ ರಕ್ಷಣೆ ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ, ನ್ಯಾಯಾಂಗದ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಪೊಲೀಸರು ಕ್ರಮ ಕೈಗೊಂಡು ಉದಯನಿಧಿಯನ್ನು ಬಂಧಿಸಿದ್ದಾರೆ.

ಈ ಬೆಳವಣಿಗೆ ವಿರೋಧ ಪಕ್ಷವಾಗಿರುವ ಡಿಎಂಕೆ ಮತ್ತು ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಟಿವಿಕೆ ಹಾಗೂ ಬಿಜೆಪಿ ನಾಯಕರು ಉದಯನಿಧಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

LEAVE A REPLY

Please enter your comment!
Please enter your name here