ಎಸ್‌ಐಆರ್ ಹಿನ್ನೆಲೆ: ಜಿಬಿಎ ಚುನಾವಣೆ ಡಿಸೆಂಬರ್‌ಗೆ ಮುಂದೂಡಲು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ
ನವದೆಹಲಿ, ಜು.10: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಆಗಸ್ಟ್ ಒಳಗೆ ನಡೆಸುವುದು ಸಾಧ್ಯವಿಲ್ಲ ಎಂದು ತಿಳಿಸಿರುವ ರಾಜ್ಯ ಸರ್ಕಾರ, ಚುನಾವಣೆ ನಡೆಸಲು ಡಿಸೆಂಬರ್‌ವರೆಗೆ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸ್ವೀಕಾರ ಹಾಗೂ ಅವುಗಳ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ವಿವರಿಸಿದೆ.
ಪ್ರಸ್ತುತ ಎಸ್‌ಐಆರ್ ಕಾರ್ಯದಲ್ಲಿ ಸುಮಾರು 8,972 ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), 938 ಮೇಲ್ವಿಚಾರಕರು, 28 ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಹಾಗೂ 75 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (ಎಇಆರ್‌ಒ) ಸೇರಿದಂತೆ ಸಾವಿರಾರು ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಇದೇ ಸಿಬ್ಬಂದಿಯನ್ನು ಜಿಬಿಎ ಚುನಾವಣೆಯಲ್ಲೂ ಬಳಸಬೇಕಿರುವುದರಿಂದ ಮಾನವ ಸಂಪನ್ಮೂಲದ ಕೊರತೆ ಎದುರಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಸುಪ್ರೀಂ ಕೋರ್ಟ್ ಮೇ 20, 2026ರಂದು ನೀಡಿದ್ದ ಆದೇಶದಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗಳನ್ನು ಆಗಸ್ಟ್ 31, 2026ರೊಳಗೆ ಪೂರ್ಣಗೊಳಿಸುವಂತೆ ನಿರ್ದೇಶಿಸಿತ್ತು. ಇದೀಗ ಆ ಆದೇಶವನ್ನು ಮಾರ್ಪಡಿಸಿ, ಡಿಸೆಂಬರ್ ಒಳಗೆ ಚುನಾವಣೆ ನಡೆಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಜಿಬಿಎ ಚುನಾವಣೆಗೆ ಮತಗಟ್ಟೆ ಸಿಬ್ಬಂದಿ, ರಿಟರ್ನಿಂಗ್ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಇದೇ ಸಮಯದಲ್ಲಿ ಎಸ್‌ಐಆರ್ ಕಾರ್ಯವೂ ನಡೆಯುತ್ತಿರುವುದರಿಂದ ಎರಡೂ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಸರ್ಕಾರ ಹೇಳಿದೆ.
ಬೆಂಗಳೂರು ನಗರದಲ್ಲಿ ಸುಮಾರು 1.03 ಕೋಟಿ ಮತದಾರರಿದ್ದು, ಸುಮಾರು 40 ಲಕ್ಷ ಮನೆಗಳಿಗೆ ಭೇಟಿ ನೀಡಿ ಮತದಾರರ ಪರಿಶೀಲನೆ ನಡೆಸಬೇಕಿದೆ. ಕರಡು ಮತದಾರರ ಪಟ್ಟಿಗೆ ಲಕ್ಷಾಂತರ ಆಕ್ಷೇಪಣೆಗಳು ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಹಾಗೂ ಆಕ್ಷೇಪಣೆಗಳು ಬರಬಹುದು ಎಂದು ಸರ್ಕಾರ ಅಂದಾಜಿಸಿದೆ.
ಪ್ರತಿಯೊಂದು ಅರ್ಜಿ ಮತ್ತು ಆಕ್ಷೇಪಣೆಯ ವಿಚಾರಣೆ ನಡೆಸಿ ಆದೇಶ ನೀಡುವುದು ಕಡ್ಡಾಯವಾಗಿದ್ದು, ನಿಖರ ಮತ್ತು ಅಂತಿಮ ಮತದಾರರ ಪಟ್ಟಿಯಿಲ್ಲದೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗಾಗಿ ಅಂತಿಮ ಮತದಾರರ ಪಟ್ಟಿ ಸಿದ್ಧವಾಗುವುದು ಅಗತ್ಯವಾಗಿರುವುದರಿಂದ ಡಿಸೆಂಬರ್‌ವರೆಗೆ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.




