ವಿದೇಶಿ ವಿದ್ಯಾರ್ಥಿಗಳ ಮೊದಲ ಆಯ್ಕೆ ಕರ್ನಾಟಕ!

0
5

ವಿದೇಶಿ ವಿದ್ಯಾರ್ಥಿಗಳು ಕಲಿಯುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ; 173 ದೇಶಗಳಿಂದ ಭಾರತಕ್ಕೆ 58 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಗಮನ

ನವದೆಹಲಿ, ಜು.13: ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದೇಶಿ ವಿದ್ಯಾರ್ಥಿಗಳ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2023–24ನೇ ಶೈಕ್ಷಣಿಕ ವರ್ಷದಲ್ಲಿ 173 ದೇಶಗಳಿಂದ 58,134 ವಿದ್ಯಾರ್ಥಿಗಳು ಭಾರತಕ್ಕೆ ಬಂದು ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE) ವರದಿ ತಿಳಿಸಿದೆ.

ವಿದೇಶಿ ವಿದ್ಯಾರ್ಥಿಗಳನ್ನು ಹೆಚ್ಚು ಸೆಳೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ರಾಜ್ಯದ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 7,914 ವಿದೇಶಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ನಂತರದ ಸ್ಥಾನಗಳಲ್ಲಿ ಪಂಜಾಬ್‌ (7,902), ಮಹಾರಾಷ್ಟ್ರ (6,190), ಉತ್ತರ ಪ್ರದೇಶ (5,953) ಮತ್ತು ತಮಿಳುನಾಡು (5,694) ರಾಜ್ಯಗಳಿವೆ.

ಭಾರತಕ್ಕೆ ಬಂದಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ನೇಪಾಳ ಮೊದಲ ಸ್ಥಾನದಲ್ಲಿದೆ. ಒಟ್ಟು ವಿದ್ಯಾರ್ಥಿಗಳಲ್ಲಿ 24.1 ಶೇಕಡಾ ಮಂದಿ ನೇಪಾಳದಿಂದ ಬಂದಿದ್ದಾರೆ. ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ (7%), ಅಮೆರಿಕ ಮತ್ತು ಬಾಂಗ್ಲಾದೇಶ (ತಲಾ 5.9%), ನೈಜೀರಿಯಾ (5.5%) ಹಾಗೂ ಜಿಂಬಾಬ್ವೆ (4%) ದೇಶಗಳ ವಿದ್ಯಾರ್ಥಿಗಳಿದ್ದಾರೆ. ಮೊದಲ 10 ದೇಶಗಳಿಂದಲೇ ಒಟ್ಟು ವಿದೇಶಿ ವಿದ್ಯಾರ್ಥಿಗಳ 63.8 ಶೇಕಡಾ ಮಂದಿ ಭಾರತಕ್ಕೆ ಬಂದಿದ್ದಾರೆ.

ಒಟ್ಟು ವಿದೇಶಿ ವಿದ್ಯಾರ್ಥಿಗಳಲ್ಲಿ 42,779 ಮಂದಿ (73.6%) ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 9,845 ಮಂದಿ (16.8%) ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಉಳಿದವರು ಪಿಎಚ್‌ಡಿ, ಡಿಪ್ಲೊಮಾ, ಪ್ರಮಾಣಪತ್ರ ಹಾಗೂ ಇತರ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 48,898ರಿಂದ 58,134ಕ್ಕೆ ಏರಿಕೆಯಾಗಿದೆ. ಅಂದರೆ 18.9 ಶೇಕಡಾ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.

ಕೇಂದ್ರ ಸರ್ಕಾರದ ‘ಸ್ಟಡಿ ಇನ್ ಇಂಡಿಯಾ’ ಯೋಜನೆಯಿಂದ ಭಾರತವು ಉತ್ತಮ ಗುಣಮಟ್ಟದ ಮತ್ತು ಕಡಿಮೆ ವೆಚ್ಚದ ಶಿಕ್ಷಣ ನೀಡುವ ದೇಶವಾಗಿ ಹೆಸರು ಗಳಿಸಿದೆ. ಇದರಿಂದ ಲೆಬನಾನ್, ಮಂಗೋಲಿಯಾ, ಕಜಕಸ್ತಾನ, ಬೆಲಾರಸ್, ಮೆಕ್ಸಿಕೊ, ಚಿಲಿ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳು ಭಾರತದಲ್ಲಿ ಶಿಕ್ಷಣ ಪಡೆಯಲು ಬರುತ್ತಿದ್ದಾರೆ.

ಈ ವರದಿಯನ್ನು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳ ಪ್ರವೇಶ, ಶಿಕ್ಷಕರ ಸಂಖ್ಯೆ, ಮೂಲಸೌಕರ್ಯ ಹಾಗೂ ಪರೀಕ್ಷಾ ಫಲಿತಾಂಶಗಳ ಮಾಹಿತಿಯೂ ಸೇರಿದೆ.

LEAVE A REPLY

Please enter your comment!
Please enter your name here