ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರದ ಕಠಿಣ ಕ್ರಮ; ಹೊಸ ಮಸೂದೆಗೆ ಸಚಿವ ಸಂಪುಟದ ಅನುಮೋದನೆ

0
3

ನವದೆಹಲಿ, ಜು.24: ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರೆ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ನೀಟ್ ಸೇರಿದಂತೆ ವಿವಿಧ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯಲು ರೂಪಿಸಿರುವ ಹೊಸ ಕಠಿಣ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಹಿಂದೆಯೇ ಕೇಂದ್ರ ಸರ್ಕಾರ ‘ಪಬ್ಲಿಕ್ ಪರೀಕ್ಷೆಗಳ (ಅಕ್ರಮಗಳ ತಡೆ) ಕಾಯ್ದೆ–2024’ ಜಾರಿಗೆ ತಂದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತದ ಬಳಿಕ 2024ರ ಜೂನ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಕಾಯ್ದೆ ಜಾರಿಗೆ ಬರುವ ಮೊದಲು ಕೇಂದ್ರ ಸರ್ಕಾರ ಹಾಗೂ ಅದರ ಅಧೀನ ಸಂಸ್ಥೆಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಸಮಗ್ರ ಕಾನೂನು ಇರಲಿಲ್ಲ.

ಈ ಕಾಯ್ದೆಯು ಕೇಂದ್ರ ಲೋಕಸೇವಾ ಆಯೋಗ (UPSC), ಸಿಬ್ಬಂದಿ ಆಯ್ಕೆ ಆಯೋಗ (SSC), ರೈಲ್ವೆ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸೇರಿದಂತೆ ವಿವಿಧ ಕೇಂದ್ರ ಸಂಸ್ಥೆಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶ ಹೊಂದಿದೆ.

ಈ ಹಿಂದೆ ಪರೀಕ್ಷಾ ಅಕ್ರಮ ಅಥವಾ ನಕಲು ಪ್ರಕರಣಗಳಲ್ಲಿ ಭಾಗಿಯಾದವರಿಗೆ ಮೂರುರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಹೊಸ ಮಸೂದೆಯಲ್ಲಿ ಸಂಘಟಿತ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರಿಗೆ ಐದುರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಕನಿಷ್ಠ ₹1 ಕೋಟಿ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ, ಒ.ಎಮ್.ಆರ್(OMR) ಉತ್ತರ ಪತ್ರಿಕೆಗಳ ತಿರುಚಾಟ, ನಕಲಿ ವೆಬ್‌ಸೈಟ್‌ಗಳ ಸೃಷ್ಟಿ, ನಕಲಿ ಪ್ರವೇಶ ಪತ್ರಗಳ ವಿತರಣೆ ಸೇರಿದಂತೆ ಒಟ್ಟು 15 ವಿಧದ ಕಾನೂನುಬಾಹಿರ ಕೃತ್ಯಗಳನ್ನು ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಸಾರ್ವಜನಿಕ ಪರೀಕ್ಷೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

LEAVE A REPLY

Please enter your comment!
Please enter your name here