ಸಂಜೆ 5.01ಕ್ಕೆ ವೀಡಿಯೊ ಸಾಂಗ್ ಅನಾವರಣ; ನವೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧತೆ
ಬೆಂಗಳೂರು, ಅ.30: ಪರಿಸರ ಕಾಳಜಿಯ ಕಥಾವಸ್ತುವನ್ನು ಮನರಂಜನಾತ್ಮಕವಾಗಿ ಪ್ರೇಕ್ಷಕರ ಮುಂದಿಡಲು ಸಜ್ಜಾಗಿರುವ ನಿರ್ದೇಶಕ ಕುಮಾರ್ ಅವರ ‘ಅಮರಾವತಿ’ ಚಿತ್ರದ ‘ದೂರಿಯಮ್ಮ’ ವೀಡಿಯೊ ಸಾಂಗ್ ಇಂದು ಸಂಜೆ 5.01ಕ್ಕೆ ಬಿಡುಗಡೆಯಾಗಲಿದೆ.
‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಹಾಗೂ ಇತ್ತೀಚೆಗೆ ತೆರೆಕಂಡ ‘ಲವ್ ಯು ಮುದ್ದು’ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ಕುಮಾರ್, ಇದೀಗ ವಿಭಿನ್ನ ಕಥಾಹಂದರದೊಂದಿಗೆ ‘ಅಮರಾವತಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಗಾಯಕ ಹಾಗೂ ನಟ ನವೀನ್ ಸಜ್ಜು ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ವಿಶಿಷ್ಟ ಕಾಮಿಡಿ ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು, ಮಡಿಕೇರಿಯಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯನ್ನು ಆಧರಿಸಿ, ಕೇವಲ ಒಂದೇ ದಿನದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳನ್ನು ಒಳಗೊಂಡಿದೆ. ಮಡಿಕೇರಿ ಹಾಗೂ ಸುತ್ತಮುತ್ತಲಿನ ಸುಂದರ ಪ್ರಕೃತಿ ಸೌಂದರ್ಯದ ನಡುವೆ, ನೈಜ ಮಳೆಯಲ್ಲಿಯೇ ಚಿತ್ರತಂಡ ಸತತ 40 ದಿನಗಳ ಕಾಲ ಚಿತ್ರೀಕರಣ ನಡೆಸಿರುವುದು ಚಿತ್ರದ ವಿಶೇಷತೆಯಾಗಿದೆ.
ನಿರ್ದೇಶನದ ಜತೆಗೆ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಹಾಗೂ ಸೆನ್ಸಾರ್ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ. ಇದೇ ನವೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಚಿತ್ರದ ಆಕರ್ಷಕ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.
ಚಿತ್ರದಲ್ಲಿ ನವೀನ್ ಸಜ್ಜು ಅವರೊಂದಿಗೆ ಗಿರೀಶ್ ಶಿವಣ್ಣ, ಯಶ್ ಶೆಟ್ಟಿ, ಸಮೀಕ್ಷಾ ರಾಮ್, ಗೌರಿ ಶೇವಾ, ಸುಮಂತ್ ಹಾಗೂ ವಿಜೇತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನವೀನ್ ಚಲ್ಲ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದು, ನವೀನ್ ಸಜ್ಜು ಮತ್ತು ಆಕಾಶ್ ಪರ್ವ ಜೋಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇಂದು ಬಿಡುಗಡೆಯಾಗಲಿರುವ ‘ದೂರಿಯಮ್ಮ’ ಹಾಡಿನ ಮೂಲಕ ‘ಅಮರಾವತಿ’ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.




