ಜಂತರ್ ಮಂತರ್ ಪೆಲೆಟ್ ಗನ್ ವಿವಾದ; ಕರ್ತವ್ಯದಲ್ಲಿ ನಿರ್ಭಯವಾಗಿ ಕಾರ್ಯನಿರ್ವಹಿಸಿ: ಸಿಆರ್‌ಪಿಎಫ್ ಡಿಜಿ

0
2

ನವದೆಹಲಿ‌, ಜು.30: ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಕೆಯ ಕುರಿತು ವಿವಾದ ಮುಂದುವರಿದಿರುವ ನಡುವೆಯೇ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಭಯವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದಾರೆ. ಕರ್ತವ್ಯದ ಭಾಗವಾಗಿ ಸಿಬ್ಬಂದಿ ತೆಗೆದುಕೊಳ್ಳುವ ಪ್ರಾಮಾಣಿಕ ನಿರ್ಧಾರಗಳು ಮತ್ತು ಕ್ರಮಗಳ ಸಂಪೂರ್ಣ ಹೊಣೆಯನ್ನು ತಾವು ಹೊರುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಸೋಮವಾರ ನಡೆದ ಸಿಆರ್‌ಪಿಎಫ್ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯಾಚರಣೆ ಅಥವಾ ಕಾನೂನು ಸುವ್ಯವಸ್ಥೆ ನಿರ್ವಹಣೆಯ ಸಂದರ್ಭ ಸಿಬ್ಬಂದಿ ಸದುದ್ದೇಶದಿಂದ ಕೈಗೊಳ್ಳುವ ಕ್ರಮಗಳಿಗೆ ಹೆದರಬೇಕಾದ ಅಗತ್ಯವಿಲ್ಲ ಎಂದು ಹೇಳಿದರು. ಜವಾಬ್ದಾರಿ ಹೊರುವ ಸಂದರ್ಭ ಬಂದರೆ ಅದನ್ನು ಮಹಾನಿರ್ದೇಶಕರಾಗಿ ತಾವೇ ಹೊರುತ್ತೇನೆ ಎಂದರು.

ಜುಲೈ 20ರಂದು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಂಸತ್ ಚಲೋ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕಾರ್ಯಕರ್ತರನ್ನು ನಿಯಂತ್ರಿಸುವ ವೇಳೆ ಸಿಆರ್‌ಪಿಎಫ್‌ನ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಎಫ್) ಕೈಗೊಂಡ ಕ್ರಮಗಳ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಘಟನೆಯಲ್ಲಿ ಮೂವರಿಗೆ ಪೆಲೆಟ್ ಗಾಯಗಳಾಗಿದ್ದು, ಈ ಹಿನ್ನೆಲೆಯಲ್ಲಿ ಆರ್‌ಎಎಫ್ ಕಾರ್ಯವೈಖರಿ ಪರಿಶೀಲನೆಗೆ ಒಳಪಟ್ಟಿದೆ.

ಆಂತರಿಕ ಪರಿಶೀಲನೆಯಲ್ಲಿ ಜನಸಮೂಹ ನಿಯಂತ್ರಣಕ್ಕೆ ಅನುಸರಿಸಿದ ಬಲಪ್ರಯೋಗದ ಹಂತಗಳು ನಿಗದಿತ ಮಾರ್ಗಸೂಚಿ ಹಾಗೂ ಆರ್‌ಎಎಫ್ ತರಬೇತಿಗೆ ಅನುಗುಣವಾಗಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ಕರ್ತವ್ಯಕ್ಕೆ ನಿಯೋಜಿಸುವ ಮೊದಲು ಸಿಬ್ಬಂದಿಗೆ ಸಮರ್ಪಕ ಹಾಗೂ ಸಮಯೋಚಿತ ಸೂಚನೆಗಳನ್ನು ನೀಡಲಾಗಿಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ.

ಆರ್‌ಎಎಫ್ ಮಹಾನಿರೀಕ್ಷಕಿ ಸೀಮಾ ಧುಂಧಿಯಾ ಅಧಿಕಾರಿಗಳಿಗೆ, ಜಮ್ಮು-ಕಾಶ್ಮೀರದಂತಹ ವಿಶೇಷ ಕಾರ್ಯಾಚರಣೆ ಪ್ರದೇಶಗಳಿಂದ ವರ್ಗಾವಣೆಯಾದ ಸಿಬ್ಬಂದಿಯನ್ನು ತಕ್ಷಣವೇ ದೆಹಲಿಯಂತಹ ಪ್ರದೇಶಗಳಲ್ಲಿ ಜನಸಮೂಹ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಇಂತಹ ಸಿಬ್ಬಂದಿಯ ಕಾರ್ಯಪರಿಸ್ಥಿತಿ ವಿಭಿನ್ನವಾಗಿರುವುದರಿಂದ ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಮತೋಲಿತ ಹಾಗೂ ಸೂಕ್ಷ್ಮ ದೃಷ್ಟಿಕೋನ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ.

ಜನಸಮೂಹ ನಿಯಂತ್ರಣದ ವೇಳೆ ಅಗತ್ಯವಿರುವ ಮಟ್ಟಿಗೆ ಮಾತ್ರ ಬಲಪ್ರಯೋಗ ಮಾಡಬೇಕು. ಅದಕ್ಕೂ ಮುನ್ನ ಎಚ್ಚರಿಕೆ ನೀಡುವುದು, ಪರಿಸ್ಥಿತಿಗೆ ಅನುಗುಣವಾಗಿ ಲಾಠಿಚಾರ್ಜ್, ಅಶ್ರುವಾಯು ಸೇರಿದಂತೆ ಅನುಮೋದಿತ ಕ್ರಮಗಳನ್ನು ಹಂತ ಹಂತವಾಗಿ ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಹಿರಿಯ ಅಧಿಕಾರಿಗಳ ಪ್ರಕಾರ, ಕ್ಷೇತ್ರ ಮಟ್ಟದಲ್ಲಿ ಆರ್‌ಎಎಫ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಆಂತರಿಕ ಮೌಲ್ಯಮಾಪನದಲ್ಲಿ ನಿಯೋಜನೆ ಮತ್ತು ಕಾರ್ಯಾಚರಣೆಯ ಹಲವು ಅಂಶಗಳಲ್ಲಿ ಗಂಭೀರ ಲೋಪಗಳು ಕಂಡುಬಂದಿದ್ದು, ಅವುಗಳನ್ನು ತಕ್ಷಣ ಸರಿಪಡಿಸುವ ಅಗತ್ಯವಿದೆ ಎಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here