ನ. 28 ಕ್ಕೆ ಗೃಹಲಕ್ಷ್ಮಿ ಬ್ಯಾಂಕ್‌ಗೆ ಚಾಲನೆ

0
22
Advertisement

ತುಮಕೂರು, ನ.19: ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್‌ಗಳನ್ನು ಆರಂಭಿಸುತ್ತಿದೆ. ನವೆಂಬರ್ 28 ರಂದು ಬ್ಯಾಂಕ್‌ಗೆ ಚಾಲನೆ ನೀಡಲಾಗುವುದು. ಮಹಿಳೆಯರು ಷೇರುದಾರರಾಗಿ, ಕಡಿಮೆ ಬಡ್ಡಿದರದಲ್ಲಿ 30,000 ದಿಂದ 3 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು. ಕೃಷಿ, ಹೈನುಗಾರಿಕೆ, ವಾಹನ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸಾಲ ಲಭ್ಯವಿದೆ. ಯಾವುದೇ ಸರ್ಕಾರ ಬಂದರೂ ಬ್ಯಾಂಕ್ ಮುಚ್ಚುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ತುಮಕೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಮಾತಾಡಿ ಗೃಹಲಕ್ಷ್ಮಿ ಬ್ಯಾಂಕ್‌ ಬಗ್ಗೆ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮತ್ತಷ್ಟು ಸಹಕಾರ ನೀಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್‌ಗಳನ್ನು ಆರಂಭಿಸುತ್ತಿದೆ. ನವೆಂಬರ್ 28 ರಂದು ಬ್ಯಾಂಕ್‌ಗೆ ಚಾಲನೆ ನೀಡಲಾಗುತ್ತಿದೆ. ಇನ್ನು ಸಾಲ ಸೌಲಭ್ಯ ಪಡೆಯಲು ಮಹಿಳೆಯರು ಹಣ ಕಟ್ಟಿ ಷೇರ್ ಹೋಲ್ಡರ್ಸ್‌ ಆಗಬೇಕಿದೆ. ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮೋಟಮ್ಮ ಅವರು ಸಚಿವರಾಗಿದ್ದಾಗ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ನನ್ನ ಹೃದಯಕ್ಕೆ ಹತ್ತಿರವಾಗಿರುವ ಗೃಹಲಕ್ಷ್ಮಿ ಬ್ಯಾಂಕ್ ತರಲಾಗುತ್ತಿದೆ ಎಂದರು.

ಈ ಹಿಂದೆ ಗಂಡನ ಉದ್ಯಮದಲ್ಲಿ ಹೆಂಡತಿ ಕೈಜೋಡಿಸುತ್ತಿದ್ದಳು. ಆದರೆ, ಇತ್ತೀಚೆಗೆ ಮಹಿಳೆಯರೆ ಉದ್ಯಮಿಗಳಾಗುತ್ತಿದ್ದಾರೆ. ಇಂತಹ ಮಹಿಳೆಯರಿಗೆ ‌ಸಹಾಯ‌ ಮಾಡುವ ಉದ್ದೇಶದಿಂದಲೇ ಗೃಹಲಕ್ಷ್ಮಿ ಬ್ಯಾಂಕ್ ಆರಂಭಿಸಲಾಗುತ್ತಿದೆ. ಧರ್ಮಸ್ಥಳ ಸ್ವ ಸಹಾಯ ಸಂಘ ಕಳೆದ 20 ವರ್ಷಗಳಿಂದ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಅವರ ಸೇವೆ ಸದಾ ಸ್ಮರಣೀಯ. ಆದರೆ ಕೆಲವೊಂದು ಖಾಸಗಿ ಫೈನಾನ್ಸ್ ಕಂಪನಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟಲು ಗೃಹಲಕ್ಷ್ಮಿ ಸಂಘ‌ ಸಹಾಯವಾಗಲಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಗೃಹಲಕ್ಷ್ಮಿ ಸಂಘ – ಬ್ಯಾಂಕ್‌ ಸೇರಲು ನಿಯಮಗಳೇನು?

ಗೃಹಲಕ್ಷ್ಮಿ ಬ್ಯಾಂಕ್‌ಗೆ ಸೇರ ಬಯಸುವವರು ಸಾವಿರ ರೂಪಾಯಿ ಕೊಟ್ಟು ಷೇರ್ ಹೋಲ್ಡರ್ ಆಗಬೇಕು.
ಸಂಪೂರ್ಣ ಕ್ಯಾಶ್ ಲೆಸ್ ವ್ಯವಹಾರ ನಡೆಯಲಿದೆ.
ಷೇರುದಾರರಾದ ಬಳಿಕ ಪ್ರತಿ ತಿಂಗಳು ಇನ್ನೂರು ರೂಪಾಯಿ ಕಟ್ಟಬೇಕು.
ಷೇರುದಾರರಾದ ಆರು ತಿಂಗಳಲ್ಲಿ ‌ಲೋನ್ ಪಡೆಯಬಹುದು.
ಮೂವತ್ತು ಸಾವಿರದಿಂದ ಮೂರು ಲಕ್ಷದವರೆಗೂ ಸಾಲ ಸೌಲಭ್ಯ ಸಿಗಲಿದೆ.
ಗೃಹಲಕ್ಷ್ಮಿ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಮಾತ್ರ ನೀಡಲಾಗುವುದು.
ಗುಂಪು, ಸಂಘಗಳಿಗೆ ಸಾಲ ನೀಡಲಾಗುವುದಿಲ್ಲ.
ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

Advertisement

LEAVE A REPLY

Please enter your comment!
Please enter your name here