
ಬೆಂಗಳೂರು, ನ.21: ರಾಜ್ಯ ಕಾಂಗ್ರೆಸ್ ಸರಕಾರವು ವಾಹನ ಸವಾರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಆಗಲೇ ಜಾರಿಯಲ್ಲಿದ್ದ ಶೇ.50 ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಯೋಜನೆಯನ್ನು ಸರಕಾರ ಮರುಜಾರಿಗೆ ತಂದಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ. ರಾಜ್ಯ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಸಹಿ ಮಾಡಿದ ಆದೇಶದ ಪ್ರಕಾರ, ನವೆಂಬರ್ 21 ರಿಂದ ರಾಜ್ಯದಾದ್ಯಂತ ಬಾಕಿ ಇರುವ ಸಂಚಾರ ದಂಡಗಳ ಮೇಲೆ 50 ಪರ್ಸೆಂಟ್ ರಿಯಾಯಿತಿ ದೊರೆಯಲಿದೆ. ಈ ವಿಶೇಷ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿದ್ದು, ವಾಹನ ಮಾಲೀಕರು ಈ ಅವಧಿಯೊಳಗೆ ಬಾಕಿ ಇರುವ ದಂಡಗಳನ್ನು ಕಡಿತ ದರದಲ್ಲಿ ಪಾವತಿಸಬಹುದು.
ಹಲವಾರು ತಿಂಗಳಿಂದ ದಂಡ ಪಾವತಿಸದೆ ಉಳಿಸಿಕೊಂಡಿರುವ ವಾಹನ ಸವಾರರು ಈಗ ಈ ಆಫರ್ ಬಳಸಿಕೊಂಡು ತಮ್ಮ ಬಾಕಿಯನ್ನು ತೀರಿಸಿಕೊಳ್ಳಬಹುದಾಗಿದೆ. ಬೆಂಗಳೂರಿನಲ್ಲಿ ಸಂಚಾರ ಪೊಲೀಸ್ ಠಾಣೆಗಳು, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ದಂಡದ ವಿವರ ಪಡೆದು ಅಲ್ಲಿಯೇ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ, ಎಲ್ಲಾ ಅರ್ಹ ವಾಹನ ಸವಾರರು ರಿಯಾಯಿತಿಯನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸೂಚಿಸಿದೆ.





