ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಮುಂದುವರಿದರೆ ಕಠಿಣ ಕ್ರಮ: ಶರಣ ಪ್ರಕಾಶ್ ಪಾಟೀಲ್ ಎಚ್ಚರಿಕೆ

0
6

ಬೆಂಗಳೂರು, ಏ.18: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ಅಸಮರ್ಪಕ ಐಸಿಯು ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡದಿರುವ ಬಗ್ಗೆ ನಿರಂತರ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.

ನಗರದಲ್ಲಿ ನಡೆದ ಇಲಾಖಾ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಆಸ್ಪತ್ರೆಗಳ ಸ್ಥಿತಿಗತಿಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರಿಂದ ಬರುತ್ತಿರುವ ದೂರುಗಳು ಹಾಗೂ ಲೋಕಾಯುಕ್ತರ ಅಭಿಪ್ರಾಯಗಳ ಹಿನ್ನೆಲೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಔಷಧ ಕೊರತೆ ಕುರಿತು ಪ್ರಶ್ನಿಸಿದ ಅವರು, “ಔಷಧ ಸಂಪೂರ್ಣ ಮುಗಿದ ನಂತರವೇ ಟೆಂಡರ್ ಕರೆಯುವುದೇಕೆ?” ಎಂದು ಕಿಡಿಕಾರಿದರು.

ಮುಂಚಿತ ಯೋಜನೆಯ ಕೊರತೆಯೇ ಸಮಸ್ಯೆಗೆ ಕಾರಣ ಎಂದು ಹೇಳಿದ ಸಚಿವರು, ಅಗತ್ಯವನ್ನು ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಅಂದಾಜಿಸಿ ಖರೀದಿ ಪ್ರಕ್ರಿಯೆ ಆರಂಭಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಿದರು.

ಐಸಿಯು ಹಾಸಿಗೆಗಳ ಕೊರತೆ ಕುರಿತ ಗಂಭೀರ ದೂರುಗಳ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಅಧಿಕಾರಿಗಳಿಂದ ಸ್ಪಷ್ಟನೆ ಕೋರಿದರು. ಹೊಸದಾಗಿ ನಿರ್ಮಾಣವಾಗುತ್ತಿರುವ 10 ಮಹಡಿಗಳ ಕಟ್ಟಡದಲ್ಲಿ ಒಂದು ಮಹಡಿಯನ್ನು ಐಸಿಯು ಸೌಲಭ್ಯಕ್ಕೆ ಮೀಸಲಿಡುವಂತೆ ಸೂಚನೆ ನೀಡಿದರು. ಈ ಕಟ್ಟಡವನ್ನು ಮೇ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಸ್ವಚ್ಛತೆ ಮತ್ತು ಮೂಲಸೌಲಭ್ಯಗಳ ಕುರಿತು ಕೂಡ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವರು, ಆಸ್ಪತ್ರೆಗಳ ಶೌಚಾಲಯಗಳು ಸದಾ ಸ್ವಚ್ಛವಾಗಿರಬೇಕು ಹಾಗೂ ಲಿಫ್ಟ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. “ಸ್ವಚ್ಛ ಶೌಚಾಲಯಗಳು ಐಶಾರಾಮಿ ಅಲ್ಲ; ಅದು ಮೂಲಭೂತ ಹಕ್ಕು” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಬಾಕಿ ಇರುವ ಬಿಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಸಲ್ಲಿಸದಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಆಸ್ಪತ್ರೆಗಳು ಕೇವಲ ಶೇ.60ರಷ್ಟು ಮಾತ್ರ ಬಿಲ್ ಸಲ್ಲಿಸುತ್ತಿರುವುದು ಅಸಮರ್ಪಕ ಎಂದು ಹೇಳಿ, ಶೇ.100ರಷ್ಟು ಬಿಲ್ ಸಲ್ಲಿಸುವಂತೆ ಎಚ್ಚರಿಸಿದರು.

LEAVE A REPLY

Please enter your comment!
Please enter your name here