ರಾಜ್ಯಾದ್ಯಂತ ಉಷ್ಣ ಅಲೆ ತೀವ್ರ; 45 ಡಿಗ್ರಿವರೆಗೆ ತಾಪಮಾನ ಏರಿಕೆ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ!

0
2

ಬೆಂಗಳೂರು, ಏ.18: ಕರ್ನಾಟಕವು ಸದ್ಯ ತೀವ್ರ ಉಷ್ಣ ಅಲೆಯ ಹೊಡೆತಕ್ಕೆ ಸಿಲುಕಿದ್ದು, ರಾಜ್ಯದ ಹಲವೆಡೆ ತಾಪಮಾನ ಭಾರೀ ಏರಿಕೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಹಾಗೂ ಕರ್ನಾಟಕ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿವೆ.

ಉತ್ತರ ಕರ್ನಾಟಕ ಭಾಗಗಳಲ್ಲಿ ಉಷ್ಣ ಅಲೆ ಅತ್ಯಂತ ತೀವ್ರವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 44ರಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗುತ್ತಿದೆ. ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ 40 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಬಾಗಲಕೋಟೆ, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳಲ್ಲಿಯೂ ನಿರಂತರವಾಗಿ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದೆ.

ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳು ಈಗಾಗಲೇ ಬಿಸಿಲಿನ ಬೇಗೆಗೆ ತತ್ತರಿಸಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಪಮಾನ 37 ಡಿಗ್ರಿ ದಾಖಲಾಗಿದ್ದು, ಅದು 42 ಡಿಗ್ರಿಗೂ ಏರಬಹುದು ಎಂದು ಅಂದಾಜಿಸಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಉಷ್ಣತೆ ಹೆಚ್ಚಿದ್ದು, ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ. ವಿಜಯಪುರ, ಕಲಬುರ್ಗಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೀಟ್ ವೇವ್ ಅಲರ್ಟ್ ಘೋಷಿಸಲಾಗಿದೆ.

ಇನ್ನೊಂದೆಡೆ, ಬೆಂಗಳೂರು ನಗರದಲ್ಲಿಯೂ ತಾಪಮಾನ ಏರಿಕೆಯಾಗುತ್ತಿದ್ದು, ಇತ್ತೀಚೆಗೆ 36.6 ಡಿಗ್ರಿ ದಾಖಲಾಗಿದ್ದು, 38 ಡಿಗ್ರಿವರೆಗೆ ಏರಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ಮಿತವಾದ ಹವಾಮಾನ ಹೊಂದಿರುವ ಬೆಂಗಳೂರಿನಲ್ಲಿ ಈ ಮಟ್ಟದ ಉಷ್ಣತೆ ನಿವಾಸಿಗಳಿಗೆ ಅನಾನುಕೂಲ ಉಂಟುಮಾಡುತ್ತಿದೆ.

ಒಣ ಹವಾಮಾನ ಮುಂದುವರಿಕೆ
ಮುಂದಿನ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಶುಷ್ಕ ಮತ್ತು ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಧ್ಯಾಹ್ನ ವೇಳೆಯಲ್ಲಿ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬಂದರೂ, ಶಾಖದಿಂದ ಹೆಚ್ಚಿನ ಪರಿಹಾರ ದೊರೆಯುವ ಸಾಧ್ಯತೆ ಕಡಿಮೆ. ವಿಶೇಷವಾಗಿ ಒಳನಾಡು ಭಾಗಗಳಲ್ಲಿ ಬಿಸಿ ಗಾಳಿಯ ಪ್ರಭಾವ ಹೆಚ್ಚಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಹೀಟ್‌ ಸ್ಟ್ರೋಕ್ ಎಚ್ಚರಿಕೆ
ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಹೋಗಬಾರದು. ಮಧ್ಯಾಹ್ನ 12ರಿಂದ 4ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು.

ಆರೋಗ್ಯ ಇಲಾಖೆ ಕರ್ನಾಟಕ ನಿಯಮಿತವಾಗಿ ನೀರು ಕುಡಿಯುವುದು, ಎಳನೀರು, ಮಜ್ಜಿಗೆ ಹಾಗೂ ಹಣ್ಣಿನ ರಸಗಳನ್ನು ಸೇವಿಸುವುದು ಉತ್ತಮ ಎಂದು ಸಲಹೆ ನೀಡಿದೆ. ತಿಳಿ ಬಣ್ಣದ, ಸಡಿಲ ಹತ್ತಿ ಬಟ್ಟೆಗಳನ್ನು ಧರಿಸುವುದು, ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿ ಬಳಕೆ ಮಾಡುವುದು ಹಾಗೂ ಕಾಫಿ, ಟೀ ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here