ಬೆಸ್ಕಾಂ ಗ್ರಾಹಕರಿಗೆ ಪವರ್ ಶಾಕ್: ಆದಾಯ ಕೊರತೆ ನೀಗಿಸಲು ಯೂನಿಟ್‌ಗೆ 56 ಪೈಸೆ ಹೆಚ್ಚಳ!

0
4

ಬೆಂಗಳೂರು, ಏ.18: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್ ಎದುರಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) 2026-27ನೇ ಸಾಲಿಗೆ “ಟ್ರೂ-ಅಪ್” ತಿದ್ದುಪಡಿ ಅನ್ವಯ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಗ್ರಾಹಕರಿಗೆ 15 ಪೈಸೆ ಹೆಚ್ಚುವರಿ ವಸೂಲಿಗೆ ಆದೇಶ ಹೊರಡಿಸಿದೆ. ಈ ಆದೇಶ 2026 ಮೇ 1ರಿಂದ 2027 ಏಪ್ರಿಲ್ 31ರವರೆಗೆ ಅನ್ವಯವಾಗಲಿದೆ.

2024-25ನೇ ಸಾಲಿನಲ್ಲಿ ಉಂಟಾದ ಆದಾಯ ಕೊರತೆಯನ್ನು ಭರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕೆಇಆರ್‌ಸಿ ಮಾಹಿತಿಯಂತೆ, ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 2,068 ಕೋಟಿ ರೂ. ಕೊರತೆ ಕಂಡುಬಂದಿದ್ದು, ಇದನ್ನು ಸಮತೋಲನಗೊಳಿಸಲು ಹೆಚ್ಚುವರಿ ದರ ವಿಧಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳು ಸೇರಿವೆ. ಇನ್ನು ಸೆಸ್ಕ್‌ಗೆ 121.71 ಕೋಟಿ ರೂ. ಆದಾಯ ಕೊರತೆ ದಾಖಲಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ.

ಇದಕ್ಕೆ ವಿರುದ್ಧವಾಗಿ, ಇತರ ವಿದ್ಯುತ್ ಸರಬರಾಜು ಕಂಪನಿಗಳಾದ ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಸ್ಥೆ (ಎಚ್‌ಆರ್‌ಇಸಿಎಸ್) ಗ್ರಾಹಕರಿಗೆ ಮರುಪಾವತಿ ಸೌಲಭ್ಯ ದೊರೆಯಲಿದೆ. ಹೆಚ್ಚುವರಿ ಆದಾಯ ಗಳಿಸಿರುವ ಹಿನ್ನೆಲೆಯಲ್ಲಿ ಹೆಸ್ಕಾಂ ಮತ್ತು ಜೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 10 ಪೈಸೆ, ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ಹಾಗೂ ಎಚ್‌ಆರ್‌ಇಸಿಎಸ್ ಗ್ರಾಹಕರಿಗೆ 155 ಪೈಸೆ ಮರುಪಾವತಿ ಮಾಡಲು ಸೂಚಿಸಲಾಗಿದೆ.

ಮರುಪಾವತಿ ಹಾಗೂ ಹೆಚ್ಚುವರಿ ವಸೂಲಿಯನ್ನು “ಎಫ್‌ವೈ-25 ಟ್ರೂ-ಅಪ್ ಚಾರ್ಜಸ್” ಹೆಸರಿನಲ್ಲಿ ವಿದ್ಯುತ್ ಬಿಲ್ಲಿನಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗುತ್ತದೆ. ಗ್ರಾಹಕರು 2024-25ನೇ ಸಾಲಿನಲ್ಲಿ ಬಳಕೆ ಮಾಡಿದ ವಿದ್ಯುತ್ ಪ್ರಮಾಣದ ಆಧಾರದ ಮೇಲೆ 2026-27ರಲ್ಲಿ ಈ ಲೆಕ್ಕಾಚಾರ ಅನ್ವಯವಾಗಲಿದೆ.

ವಿದ್ಯುತ್ ಕಂಪನಿಗಳು ಪ್ರತಿವರ್ಷ ನಿರೀಕ್ಷಿತ ವೆಚ್ಚ ಮತ್ತು ಆದಾಯದ ಆಧಾರದ ಮೇಲೆ ದರ ನಿಗದಿಪಡಿಸಿದರೂ, ನೈಜ ವೆಚ್ಚದಲ್ಲಿ ಉಂಟಾಗುವ ವ್ಯತ್ಯಾಸ, ವಿದ್ಯುತ್ ಖರೀದಿ ದರ ಏರಿಕೆ ಹಾಗೂ ಕಾರ್ಯಾಚರಣಾ ವೆಚ್ಚಗಳ ಹೆಚ್ಚಳದಿಂದ ಆದಾಯ ಕೊರತೆ ಉಂಟಾಗುತ್ತದೆ. ಈ ವ್ಯತ್ಯಾಸವನ್ನು ಸರಿಪಡಿಸುವ ಪ್ರಕ್ರಿಯೆಯೇ “ಟ್ರೂ-ಅಪ್” ತಿದ್ದುಪಡಿ ಆಗಿದೆ.

ದರ ಬದಲಾವಣೆ (ಪ್ರತಿ ಯುನಿಟ್‌ಗೆ)

ಬೆಸ್ಕಾಂ: +56 ಪೈಸೆ
ಸೆಸ್ಕ್ (ಮೈಸೂರು): +15 ಪೈಸೆ
ಹೆಸ್ಕಾಂ (ಹುಬ್ಬಳ್ಳಿ): -10 ಪೈಸೆ
ಜೆಸ್ಕಾಂ (ಕಲಬುರಗಿ): -10 ಪೈಸೆ
ಮೆಸ್ಕಾಂ (ಮಂಗಳೂರು): -9 ಪೈಸೆ
ಎಚ್‌ಆರ್‌ಇಸಿಎಸ್ (ಹುಕ್ಕೇರಿ): -155 ಪೈಸೆ

LEAVE A REPLY

Please enter your comment!
Please enter your name here