ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ಪ್ರಮಾಣ ವಚನ ಸ್ವೀಕಾರ

0
73

ನವದೆಹಲಿ, ನ. 24: ಭಾರತದ ಸುಪ್ರೀಂ ಕೋರ್ಟಿನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸೂರ್ಯಕಾಂತ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನ್ಯಾಯಮೂರ್ತಿ ಬಿ.ಆರ್‌ ಗವಾಯಿ ಅವರು ನವೆಂಬರ್‌ 23ರಂದು ನಿವೃತ್ತರಾಗಿದ್ದು, ಸೂರ್ಯಕಾಂತ್‌ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ  ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಕ್ಟೋಬರ್ 30 ರಂದು ನೇಮಕ ಮಾಡಲಾಯಿತು. ಹುದ್ದೆಯ ಅವಧಿಯು 15 ತಿಂಗಳು ಇರಲಿದ್ದು, ಅವರಿಗೆ ಫೆಬ್ರುವರಿ 9, 2027ರಂದು 65 ವರ್ಷ ತುಂಬುವ ಹಿನ್ನೆಲೆಯಲ್ಲಿ ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.

ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.

ಮೂಲತಃ ಹರಿಯಾಣದವರಾದ ಸೂರ್ಯ ಕಾಂತ್‌  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆಯುವ 370ನೇ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ ಹಲವಾರು ಮಹತ್ವದ ತೀರ್ಪುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

LEAVE A REPLY

Please enter your comment!
Please enter your name here