ಕೆ.ಸುಗೂರು ಗ್ರಾಮಕ್ಕೆ ಮರಳಿದ ಸರ್ಕಾರಿ ಪ್ರೌಢಶಾಲೆ; ಶಿಕ್ಷಣ ಪ್ರೇಮಿ ದಿಗಂಬರ ಸ್ವಾಮಿ ಹೋರಾಟಕ್ಕೆ ಕೊನೆಗೂ ಜಯ!

0
7

ಸಿರುಗುಪ್ಪ, ಏ. 21: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಉನ್ನತೀಕರಿಸಲಾದ ಶ್ರೀ ಸಿದ್ದಲಿಂಗೇಶ್ವರ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ) ನಿರ್ಮಾಣ ವಿಚಾರದಲ್ಲಿ ಮಹತ್ವದ ತಿರುವು ಕಂಡಿದ್ದು, ಕೊನೆಗೂ ಶಾಲೆಯನ್ನು ಮೂಲಸ್ಥಳವಾದ ಕೆ.ಸುಗೂರು ಗ್ರಾಮದಲ್ಲೇ ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಶಾಲೆಯನ್ನು ಬೆಂಚಿಕ್ಯಾಂಪ್ ಗ್ರಾಮಕ್ಕೆ ಸ್ಥಳಾಂತರಿಸಿ ಅಲ್ಲಿ ಭೂಮಿಪೂಜೆ ನೆರವೇರಿಸಿದ್ದ ಕ್ರಮ ಗ್ರಾಮಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳಿಗೆ ಆಗಬಹುದಾದ ಅನಾನುಕೂಲವನ್ನು ಮನಗಂಡು, ಶಿಕ್ಷಣ ಪ್ರೇಮಿ ಹಾಗೂ ಹಳೆ ವಿದ್ಯಾರ್ಥಿಯಾದ ವಕೀಲ ದಿಗಂಬರ ಸ್ವಾಮಿ ಅವರು ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಹೋರಾಟ ಆರಂಭಿಸಿದರು.

ಶಾಲೆಯನ್ನು ಬೇರೆ ಗ್ರಾಮದಲ್ಲಿ ನಿರ್ಮಿಸುವುದರಿಂದ ಮಕ್ಕಳಿಗೆ ತೊಂದರೆ ಉಂಟಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಶಾಲೆಯನ್ನು ಮೂಲಸ್ಥಳದಲ್ಲೇ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ದಿಗಂಬರ ಸ್ವಾಮಿ ಅವರ ನಿರಂತರ ಪ್ರಯತ್ನ ಹಾಗೂ ಹೋರಾಟದ ಫಲವಾಗಿ, ಬೆಂಚಿಕ್ಯಾಂಪ್ ಗ್ರಾಮದಲ್ಲಿ ಆರಂಭಿಸಿದ್ದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಪ್ರೌಢಶಾಲೆಯನ್ನು ಕೆ.ಸುಗೂರು ಗ್ರಾಮದಲ್ಲೇ ನಿರ್ಮಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಗ್ರಾಮಸ್ಥರು ದಿಗಂಬರ ಸ್ವಾಮಿ ಅವರ ನಿಸ್ವಾರ್ಥ ಸೇವೆ ಹಾಗೂ ಹೋರಾಟವನ್ನು ಶ್ಲಾಘಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here