ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟ; ತೃತೀಯ ಭಾಷೆಗೆ ಅಂಕ ಆಧಾರಿತ ಮೌಲ್ಯಮಾಪನ

0
2

ಬೆಂಗಳೂರು, ಏ.23: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ನಿಗದಿತ ವೇಳಾಪಟ್ಟಿಗಿಂತ ಒಂದು ದಿನ ಮುಂಚಿತವಾಗಿ ಪ್ರಕಟಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ಅದರಂತೆ ಇಂದು (ಗುರುವಾರ) ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ತೀವ್ರ ಚರ್ಚೆಗೆ ಗ್ರಾಸವಾಗಿದ್ದ ತೃತೀಯ ಭಾಷೆಯ ಮೌಲ್ಯಮಾಪನ ಕುರಿತು ಹೈಕೋರ್ಟ್ ಆದೇಶದಂತೆ ಗ್ರೇಡ್ ಬದಲಿಗೆ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬುಧವಾರ ಸಂಜೆ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸಭೆಯಲ್ಲಿ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು. ನ್ಯಾಯಾಲಯದ ತೀರ್ಮಾನವನ್ನು ಪಾಲಿಸುವುದಾಗಿ ಈ ವೇಳೆ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಗ್ರೇಡ್ ವ್ಯವಸ್ಥೆ ಇರಲಿದೆ ಎಂಬ ನಿರೀಕ್ಷೆಯಿಂದ ಅನೇಕ ವಿದ್ಯಾರ್ಥಿಗಳು ತೃತೀಯ ಭಾಷೆಗೆ ಹೆಚ್ಚಿನ ಗಮನ ನೀಡಿರಲಿಲ್ಲ. ಅಂಕಗಳಿಗೆ ಪ್ರಾಮುಖ್ಯತೆ ಇಲ್ಲದ ಹಿನ್ನೆಲೆ ಕೆಲವರು ಕೇವಲ ಪರೀಕ್ಷೆ ಬರೆಯುವ ಮಟ್ಟದಲ್ಲೇ ಸೀಮಿತವಾಗಿದ್ದರು. ಇದೀಗ ಕಟ್ಟುನಿಟ್ಟಿನ ಅಂಕ ಮೌಲ್ಯಮಾಪನದಿಂದ ಅವರ ಭವಿಷ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಕೃಪಾಂಕ ನೀಡುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕೃಪಾಂಕ ನೀಡುವ ವಿಚಾರವನ್ನು ಮಧ್ಯಾಹ್ನದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗುವುದು. ಸದ್ಯ ಯಾವುದೇ ನಿರ್ದಿಷ್ಟ ಮಾಹಿತಿ ನೀಡಲು ಸಾಧ್ಯವಿಲ್ಲ, ಫಲಿತಾಂಶ ಪ್ರಕಟವಾದ ಬಳಿಕವೇ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ಕ್ಕೆ ರಾಜ್ಯದ 15,941 ಶಾಲೆಗಳಿಂದ ಒಟ್ಟು 8,65,988 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ವಿಷಯದ ಉತ್ತೀರ್ಣ ಅಂಕವನ್ನು 35ರಿಂದ 30ಕ್ಕೆ ಇಳಿಸಲಾಗಿದೆ. ಒಟ್ಟು ಉತ್ತೀರ್ಣತೆಗೆ 33 ಶೇಕಡಾ (625ರಲ್ಲಿ 206 ಅಂಕ) ಅಗತ್ಯವಾಗಿದೆ.

ಫಲಿತಾಂಶ ವೀಕ್ಷಣೆ ಹೇಗೆ?
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಜೊತೆಗೆ ಕರ್ನಾಟಕOne ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಪಡೆಯಬಹುದಾಗಿದೆ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕವೂ ಮಾಹಿತಿ ರವಾನಿಸಲಾಗುತ್ತದೆ.

ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ
ಮೊದಲ ಬಾರಿಗೆ ಈ ವರ್ಷ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಮಧ್ಯಾಹ್ನದಿಂದ ಲಭ್ಯವಾಗುವಂತೆ ಮಾಡಲಾಗಿದೆ. digilocker.gov.in ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here