ಬೆಂಗಳೂರು, ಮೇ 2: ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆ ದೇಶದಾದ್ಯಂತ ಅನೇಕ ಜನರ ಮೊಬೈಲ್‌ಗಳಿಗೆ ತುರ್ತು ಎಚ್ಚರಿಕೆ (Emergency Alert) ಸಂದೇಶ ರವಾನೆಯಾಯಿತು. ಸಂದೇಶದೊಂದಿಗೆ ಬಂದ ತೀವ್ರ ಅಲರ್ಟ್ ಧ್ವನಿಯಿಂದ ಹಲವರು ಕ್ಷಣಿಕ ಗಾಬರಿಗೊಳಗಾದ ಘಟನೆ ವರದಿಯಾಗಿದೆ.
ಭಾರತ ಸರ್ಕಾರವು ಸ್ವದೇಶಿ ತಂತ್ರಜ್ಞಾನ ಬಳಸಿ “ಸೆಲ್ ಬ್ರಾಡ್‌ಕಾಸ್ಟ್” ವ್ಯವಸ್ಥೆಯ ಮೂಲಕ ವಿಪತ್ತು ಸಂದರ್ಭಗಳಲ್ಲಿ ನಾಗರಿಕರಿಗೆ ತಕ್ಷಣ ಮಾಹಿತಿ ನೀಡುವ ಸೇವೆಯನ್ನು ಪರೀಕ್ಷಿಸುತ್ತಿದೆ. ಇದರ ಭಾಗವಾಗಿ ಈ ಸಂದೇಶವನ್ನು ಪರೀಕ್ಷಾರ್ಥವಾಗಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
“ಇದು ಕೇವಲ ಪರೀಕ್ಷಾ ಸಂದೇಶವಾಗಿದ್ದು, ಸಾರ್ವಜನಿಕರು ಯಾವುದೇ ಕ್ರಮ ಕೈಗೊಳ್ಳಬೇಕಿಲ್ಲ” ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಅಕಸ್ಮಾತ್ ಉಂಟಾದ ಜೋರಾದ ಅಲರ್ಟ್ ಧ್ವನಿಯಿಂದ ಕೆಲ ಸಮಯ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಂತರ ಇದು ಪರೀಕ್ಷಾ ಸಂದೇಶವೆಂದು ತಿಳಿದು ಬಂದ ಬಳಿಕ ಪರಿಸ್ಥಿತಿ ಸಾಮಾನ್ಯಗೊಂಡಿತು.




