ನವದೆಹಲಿ, ಮೇ.20: ಮೆಟಾ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭವಾಗಿದ್ದು, ಸುಮಾರು 8,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಫೇಸ್‌ಬುಕ್, ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂಗೆ ಮಾತೃಸಂಸ್ಥೆಯಾಗಿರುವ ಮೆಟಾ, ತನ್ನ ಒಟ್ಟು 78 ಸಾವಿರ ಉದ್ಯೋಗಿಗಳಲ್ಲಿ ಶೇ.10ರಷ್ಟು ಸಿಬ್ಬಂದಿಯನ್ನು ಹಂತ ಹಂತವಾಗಿ ವಜಾಗೊಳಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಸಾಂಪ್ರದಾಯಿಕ ರೀತಿಯಲ್ಲಿ ಎಚ್‌ಆರ್ ವಿಭಾಗಕ್ಕೆ ಕರೆಸಿ ಪಿಂಕ್ ಸ್ಲಿಪ್ ನೀಡುವ ಬದಲು, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಿದ ಬಳಿಕ ಇಮೇಲ್ ಮೂಲಕಲೇ ಲೇಆಫ್ ಮಾಹಿತಿ ರವಾನಿಸಲಾಗಿದೆ. ಬೆಳಗಿನ ಜಾವ 4 ಗಂಟೆಗೆ ಬಂದ ಇಮೇಲ್ ನೋಡಿ ಅನೇಕ ಉದ್ಯೋಗಿಗಳು ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.
ವಿಶೇಷವಾಗಿ ಎಂಜಿನಿಯರಿಂಗ್ ಹಾಗೂ ಪ್ರಾಡಕ್ಟ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೇ ಹೆಚ್ಚು ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಮ್ಯಾನೇಜರ್ ಹಂತದ ಅನೇಕ ಹುದ್ದೆಗಳನ್ನು ರದ್ದುಪಡಿಸಲಾಗಿದ್ದು, ಸುಮಾರು 6,000 ಓಪನ್ ರೋಲ್‌ಗಳನ್ನು ಮುಚ್ಚಲಾಗಿದೆ. ಇದೇ ವೇಳೆ, 7,000 ಉದ್ಯೋಗಿಗಳನ್ನು ಹೊಸ ಎಐ ತಂಡಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಮೆಟಾ, ಈ ವರ್ಷ 125ರಿಂದ 145 ಬಿಲಿಯನ್ ಡಾಲರ್‌ವರೆಗೆ ಹೂಡಿಕೆ ಮಾಡಲು ಸಜ್ಜಾಗಿದೆ. ಕಡಿಮೆ ಸಿಬ್ಬಂದಿಯೊಂದಿಗೆ ಎಐ ಕೇಂದ್ರಿತ ಸಂಸ್ಥೆಯಾಗಿ ಪರಿವರ್ತಿಸಲು ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.
ವರ್ಕ್ ಫ್ರಂ ಹೋಮ್ ಬಳಿಕ ಲೇಆಫ್
8,000 ಮಂದಿಯನ್ನು ವಜಾಗೊಳಿಸುವ ಕುರಿತು ಕಳೆದ ಕೆಲವು ತಿಂಗಳುಗಳಿಂದಲೇ ಚರ್ಚೆಗಳು ನಡೆಯುತ್ತಿದ್ದು, ಕಳೆದ ತಿಂಗಳು ಮೆಟಾ ಸಂಸ್ಥೆಯೇ ಇದನ್ನು ಪರೋಕ್ಷವಾಗಿ ದೃಢಪಡಿಸಿತ್ತು. ಬಳಿಕ ಕಚೇರಿಯೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲಾಗಿದ್ದು, ಇದೇ ಲೇಆಫ್ ಸೂಚನೆ ಎಂಬ ಅನುಮಾನ ಸಿಬ್ಬಂದಿಯಲ್ಲಿ ಮೂಡಿತ್ತು.
ವರ್ಕ್ ಫ್ರಂ ಹೋಮ್ ಅವಧಿಯಲ್ಲಿ ಉದ್ಯೋಗ ಕಡಿತ ಮಾಡಿದರೆ ಕಚೇರಿಯೊಳಗಿನ ಭಾವನಾತ್ಮಕ ಘಟನೆಗಳನ್ನು ತಪ್ಪಿಸಬಹುದು ಎಂಬುದು ಕಂಪನಿಯ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಟೆಕ್ ಕಂಪನಿಗಳು ಕೂಡ ಇಮೇಲ್ ಮೂಲಕವೇ ಉದ್ಯೋಗ ಕಡಿತ ಪ್ರಕ್ರಿಯೆ ನಡೆಸುತ್ತಿರುವುದು ಗಮನಾರ್ಹವಾಗಿದೆ.
ಎಐ ಯುಗದಲ್ಲಿ ಬದಲಾಗುತ್ತಿರುವ ಉದ್ಯೋಗ ಸ್ವರೂಪ
ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸದ ಗುಣಮಟ್ಟ ಹಾಗೂ ಸ್ವರೂಪವೇ ಬದಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವೇಗವಾಗಿ ಕೆಲಸ ಮುಗಿಸುವ ಸಾಮರ್ಥ್ಯ ಅಥವಾ ಕೋಡಿಂಗ್ ಕೌಶಲ್ಯ ಮಾತ್ರ ಸಾಕಾಗುವುದಿಲ್ಲ. ಸಂಕೀರ್ಣ ಹಾಗೂ ಅನಿಶ್ಚಿತತೆಯ ಆಧಾರಿತ ವ್ಯವಸ್ಥೆಗಳನ್ನು ನಿರ್ವಹಿಸುವ ಸಾಮರ್ಥ್ಯಕ್ಕೆ ಹೆಚ್ಚಿನ ಬೇಡಿಕೆ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ಎಐ ಸಿಸ್ಟಂಗಳನ್ನು ಕೇವಲ ಬಳಸುವವರಿಗಿಂತ, ಅವುಗಳನ್ನು ವಿನ್ಯಾಸಗೊಳಿಸುವ ಹಾಗೂ ಅಭಿವೃದ್ಧಿಪಡಿಸುವ ತಂತ್ರಜ್ಞರಿಗೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




