ರಾಜ್ಯದಲ್ಲಿ ಏಕಕಾಲಕ್ಕೆ ಎರಡು ಕಡೆ ಹುಸಿ ಬಾಂಬ್‌ ಬೆದರಿಕೆ ಕರೆ! ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

0
77

ಬೆಂಗಳೂರು, ಡಿ.16: ರಾಜ್ಯದ ಎರಡು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಹುಸಿ ಬಾಂಬ್‌ ಬೆದರಿಕೆ ಕರೆಗಳು ಬಂದಿದ್ದು, ಜನರಲ್ಲಿ ಆತಂಕ ಮನೆ ಮಾಡಿತ್ತು. ತುಮಕೂರಿನ ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಭಟ್ಕಳದ ತಹಶೀಲ್ದಾರ್‌ ಕಚೇರಿಗೆ ಮಂಗಳವಾರ ಬೆಳಿಗ್ಗೆ ಹುಸಿ ಬಾಂಬ ಕರೆಗಳು ಬಂದಿವೆ.

ಡಿ.16ರಂದು ಮಂಗಳವಾರ ಬೆಳಗ್ಗೆ 7 ಗಂಟೆಗೆ ತುಮಕೂರಿನ ಜಿಲ್ಲಾಧಿಕಾರಿಗಳ ಇ-ಮೇಲ್ ಗೆ, ಡಿಸಿ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಎಲ್ಲಾ ಕಡೆ ಪರಿಶೀಲಿಸಿದ್ದು, ಯಾವುದೇ ಬಾಂಬ್ ಪತ್ತೆಯಾಗಿಲ್ಲ.

ಎಸ್ಪಿ ಅಶೋಕ್ ಮಾತನಾಡಿ, “ಡಿಸಿ ಕಚೇರಿಯ ಒಳಗೆ ಮತ್ತು ಸುತ್ತಮುತ್ತಲಿರುವ ಕಚೇರಿಗಳಲ್ಲಿ ಪರಿಶೀಲಿಸಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ಸ್ಪೋಟಕವಾಗಲಿ ಪತ್ತೆಯಾಗಿಲ್ಲ. ಬಾಗಿಲ ಬಳಿ ಮೆಟೆಲ್ ಡಿಟೆಕ್ಟರ್ ಅನ್ನು ಇಟ್ಟಿದ್ದೇವೆ. ಇದರ ಮೂಲಕ ಎಲ್ಲರನ್ನು ಪರಿಶೀಲಿಸಿ ಒಳಗೆ ಬಿಡುತ್ತಿದ್ದೇವೆ. ಹೈ ಅಲರ್ಟ್ ನಲ್ಲಿ ಇರುತ್ತೇವೆ. ಮೇಲ್ ಬಗ್ಗೆ ಎಫ್.ಐ.ಆರ್ ಮಾಡಿ ಕೂಲಂಕಷವಾಗಿ ತನಿಖೆ ಕೈಗೊಳ್ಳುತ್ತೇವೆ” ಎಂದು ಹೇಳಿದರು.

ಭಟ್ಕಳದ ತಾಲೂಕು ಆಡಳಿತ ಸೌಧ (ಮಿನಿ ವಿಧಾನ ಸೌಧ) ದಲ್ಲಿರುವ ಭಟ್ಕಳ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಿಗ್ಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಇರುವ ಇಮೇಲ್ ಬಂದಿದೆ.

ಬೆಳಿಗ್ಗೆ ಸುಮಾರು 7.25ರ ವೇಳೆಗೆ ತಹಶೀಲ್ದಾರ್ ಕಚೇರಿಯ ಅಧಿಕೃತ ಇಮೇಲ್‌ಗೆ ಈ ಆತಂಕಕಾರಿ ಸಂದೇಶ ರವಾನೆಯಾಗಿದ್ದು, ಕಚೇರಿ ಆವರಣದಲ್ಲಿ ಶೀಘ್ರದಲ್ಲೇ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಮೇಲ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಕನ್ನಡದಲ್ಲಿ ಬರೆಯಲ್ಪಟ್ಟಿರುವ ಈ ಇಮೇಲ್‌ನಲ್ಲಿ ʼತಮಿಳರು ಹಾಗೂ ಪಾಕಿಸ್ತಾನಿಗಳ ಸೇಡುʼ ಎಂಬ ಉಲ್ಲೇಖಗಳಿದ್ದು, ತಕ್ಷಣ ಎಲ್ಲರನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.


ಬಾಂಬ್ ಬೆದರಿಕೆ ಮಾಹಿತಿ ದೊರೆಯುತ್ತಿದ್ದಂತೆ ತಕ್ಷಣ ತಹಶೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಇದುವರೆಗೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಏಕಕಾಲಕ್ಕೆ ಎರಡು ಕಡೆ ಹುಸಿ ಬಾಂಬ್‌ ಸ್ಪೋಟದ ಬೆದರಿಕೆ ಕರೆಗಳು ಬಂದಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

LEAVE A REPLY

Please enter your comment!
Please enter your name here