
ಕೊಡಗು, ಡಿ.01: ದಕ್ಷಿಣ ಕೊಡಗಿನ ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿ ಕಾಣೆಯಾಗಿದ್ದ ಎರಡು ವರ್ಷದ ಬಾಲಕಿ ಸುನನ್ಯಾಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾಕು ನಾಯಿಯ ಸಹಾಯದಿಂದ ರಕ್ಷಿಸಲಾಗಿದೆ.
ಸುನಿಲ್ ಮತ್ತು ನಾಗಿಣಿ ಎಂಬ ದಂಪತಿ ಐದು ದಿನಗಳ ಹಿಂದೆ ಎಸ್ಟೇಟ್ ಕೆಲಸಕ್ಕಾಗಿ ಈ ಪ್ರದೇಶಕ್ಕೆ ಬಂದಿದ್ದರು. ಶನಿವಾರ ಅವರು ಕೆಲಸಕ್ಕೆ ಹೋದಾಗ, ಸುನನ್ಯಾ ಇತರ ಮಕ್ಕಳ ಜೊತೆ ಆಟವಾಡುತ್ತಿದ್ದಳು. ಸಂಜೆ ವಾಪಸ್ಸಾದಾಗ ಮಗು ಕಾಣೆಯಾಗಿರುವುದು ತಿಳಿದು ಆತಂಕ ಮನೆಮಾಡಿತು. ಮಕ್ಕಳಿಗೂ ಆಕೆ ಎಲ್ಲಿಗೆ ಹೋದಳೆಂಬುದು ಗೊತ್ತಿರಲಿಲ್ಲ.ದಂಪತಿ, ಗ್ರಾಮಸ್ಥರು ಮತ್ತು ಎಸ್ಟೇಟ್ ಕಾರ್ಮಿಕರು ತಕ್ಷಣವೇ ಹುಡುಕಾಟ ಆರಂಭಿಸಿದರು. ನಂತರ ಗೋಣಿಕೊಪ್ಪಲು ಪೊಲೀಸರಿಗೆ ದೂರು ನೀಡಿ, ಅರಣ್ಯ ಇಲಾಖೆಯ ಸಹಾಯವನ್ನು ಕೋರಿದರು. ಶೋಧದ ವೇಳೆ ಅಧಿಕಾರಿಗಳು ಹುಲಿಯ ಹೆಜ್ಜೆಗುರುತುಗಳನ್ನು ಕೂಡ ಕಂಡು ಆತಂಕ ವ್ಯಕ್ತಪಡಿಸಿದರು.
ಬೆಳಗ್ಗೆ ಗ್ರಾಮಸ್ಥರು ಮತ್ತು ಪಂಚಾಯತ್ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಶೋಧಕಾರ್ಯದಲ್ಲಿ ಸೇರಿದರು. ಇವರೊಂದಿಗೆ ಬಂದ ಅನಿಲ್ ಕಾಳಪ್ಪ ತನ್ನ ಸಾಕು ನಾಯಿಗಳನ್ನೂ ಕರೆದೊಯ್ದಿದ್ದರು. ನಾಯಿಗಳಲ್ಲಿ ‘ಓರಿಯೊ’ ಎಸ್ಟೇಟ್ ಮೇಲ್ಭಾಗದಲ್ಲಿ ಬೊಗಳಲು ಪ್ರಾರಂಭಿಸಿದಾಗ ಎಲ್ಲರೂ ಆ ಕಡೆಗೆ ಧಾವಿಸಿದರು. ಅಲ್ಲಿ, ಕಾಫಿ ಗಿಡದ ಬಳಿಯಲ್ಲಿ ಸುನನ್ಯಾ ಒಂಟಿಯಾಗಿ ಕುಳಿತಿರುವುದು ಕಂಡುಬಂತು. ಮಗು ಅರಣ್ಯದ ಅಂಚಿನಲ್ಲಿ ಇಡೀ ರಾತ್ರಿ ಕಳೆದಿದ್ದಳು.

ಪೋಲೀಸ್ ಅಧಿಕಾರಿಗಳು ಪೋಷಕರು ಮಕ್ಕಳ ಬಗ್ಗೆಎಚ್ಚರಿಕೆ ವಹಿಸುವ ಅಗತ್ಯವನ್ನು ತಿಳಿಹೇಳಿದರು. ಅರಣ್ಯ ಇಲಾಖೆ ಡಿಆರ್‌ಎಫ್‌ಒ ಶ್ರೀಧರ್ ಹಾಗೂ ಸಿಬ್ಬಂದಿಗಳು, ಸ್ಥಳೀಯರು ಮತ್ತು ಪೊಲೀಸರು ಶೋಧಕಾರ್ಯದಲ್ಲಿ ಭಾಗವಹಿಸಿದ್ದರು.





