
ಚೆನ್ನೈ, ಫೆ.04: ಕುಮಾರ್ ಬಂಗಾರಪ್ಪ ಅಭಿನಯದ ಅಶ್ವಮೇಧ ಚಿತ್ರದ ಜನಪ್ರಿಯ ಗೀತೆ ‘ಹೃದಯ ಸಮುದ್ರ ಕಲಕಿ’ಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ (ಸಂಗೀತ ರಾಜ) ಅವರು ಮಂಗಳವಾರ ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
1955ರಲ್ಲಿ ಚೆನ್ನೈನಲ್ಲಿ ಜನಿಸಿದ್ದ ವೆಂಕಟೇಶ್, ತಮ್ಮ ದೀರ್ಘ ಸಂಗೀತ ಜೀವನದಲ್ಲಿ ಮಲಯಾಳಂ, ತೆಲುಗು, ಬಂಗಾಲಿ, ಹಿಂದಿ, ಕನ್ನಡ, ಒರಿಯಾ ಸೇರಿದಂತೆ ವಿವಿಧ ಭಾಷೆಗಳಲ್ಲಿನ 180ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಕನ್ನಡದಲ್ಲಿ ಅಶ್ವಮೇಧ ಮಾತ್ರವಲ್ಲದೆ ಪ್ರೇಮ ಯುದ್ಧ, ಶರವೇಗದ ಸರದಾರ ಸೇರಿದಂತೆ ಹಲವಾರು ಚಿತ್ರಗಳಿಗೆ ಅವರು ಸಂಗೀತ ನೀಡಿದ್ದು ಸಿನಿರಸಿಕರ ಮನ ಗೆದ್ದಿದೆ.
ಹಿಂದಿ ಚಿತ್ರರಂಗದಲ್ಲಿಯೂ ವೆಂಕಟೇಶ್ ತಮ್ಮದೇ ಆದ ಗುರುತು ಮೂಡಿಸಿದ್ದರು. ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕ್ಯೂಂಕಿಗೆ ಅವರು ಸಂಗೀತ ಸಂಯೋಜಿಸಿದ್ದರು. ಅದೇ ರೀತಿ ಅನಿಲ್ ಕಪೂರ್ ಮತ್ತು ಟಬು ನಟನೆಯ ಥೇವರ್ ಮಗನ್ ಚಿತ್ರದ ಹಿಂದಿ ರೀಮೇಕ್ ವಿರಾಸತ್ಗೂ ವೆಂಕಟೇಶ್ ಅವರದ್ದೇ ಸಂಗೀತ. ಹಿಂದಿಯ ಕಲ್ಟ್ ಕಾಮಿಡಿ ಸಿನಿಮಾ ಹಂಗಾಮಕ್ಕೂ ಅವರು ಸಂಗೀತ ನೀಡಿದ್ದರು. ಮಲಯಾಳಂ ಚಿತ್ರರಂಗದಲ್ಲಿ ಅನೇಕ ಯಶಸ್ವಿ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.
ವೆಂಕಟೇಶ್ ಅವರ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ, ನಿರ್ದೇಶಕ ಉನ್ನಿಕೃಷ್ಣ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ಗಾಯಕರು ಹಾಗೂ ಸಂಗೀತ ನಿರ್ದೇಶಕರು ಕೂಡ ಅವರ ಅಗಲಿಕೆಗೆ ದುಃಖ ವ್ಯಕ್ತಪಡಿಸಿದ್ದಾರೆ.
ಬುಧವಾರ ಚೆನ್ನೈನಲ್ಲಿ ಎಸ್.ಪಿ. ವೆಂಕಟೇಶ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ವರ್ಗ ನಿರ್ಧರಿಸಿದೆ. ಸಂಗೀತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಈ ಮಹಾನ್ ಕಲಾವಿದರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.





