ಸಾಮಾನ್ಯ ಮಹಿಳೆಯರಿಗೆ ಅವಕಾಶ ನೀಡುವುದು ಕೆಆರ್‌ಎಸ್ ಪಕ್ಷದ ಆದ್ಯತೆ: ರವಿ ಕೃಷ್ಣಾರೆಡ್ಡಿ

0
21
Advertisement

ಬೆಂಗಳೂರು, ಮಾ.09: ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯವಾಗಿ ಸ್ಥಾನಮಾನಗಳು ಹಾಗೂ ಮಾನ್ಯತೆಗಳು ರಾಜಕಾರಣಿಗಳ ಕುಟುಂಬದ ಸದಸ್ಯರು, ಸಿನಿಮಾ ನಟಿಯರು ಅಥವಾ ಜನಪ್ರಿಯ ವ್ಯಕ್ತಿಗಳಿಗೆ ಮಾತ್ರ ಸಿಗುತ್ತವೆ. ಆದರೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವು ಸಾಮಾನ್ಯ ಜನರು ಹಾಗೂ ಹೋರಾಟ ಮನೋಭಾವದ ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.

ಯಲಹಂಕ ನ್ಯೂಟೌನ್‌ನ ಧ್ವಜಾರೋಹಣ ಮೈದಾನದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಲಂಗಡಿ ಮಾರುವ ಮಹದೇವಿ ಹಾಗೂ ಎಳನೀರು ಮಾರುವ ಅಂಜಲಿ ಅವರಂತಹ ಸಾಮಾನ್ಯ ಹಿನ್ನೆಲೆಯ ಮಹಿಳೆಯರಿಗೂ ಪಕ್ಷದಲ್ಲಿ ಹುದ್ದೆಗಳು ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಹೋರಾಟ ಮನೋಭಾವದ ಮಹಿಳೆಯರಿಗೆ ವೇದಿಕೆ ಒದಗಿಸುವುದು ಕೆಆರ್‌ಎಸ್ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಮಾಜಿ ಶಾಸಕಿ ಮೋಟಮ್ಮ ಅವರ ಪುತ್ರಿ ಕಾಂಗ್ರೆಸ್ ಪಕ್ಷದಲ್ಲಿ ಅಂದವಾಗಿ ಶೃಂಗಾರಗೊಂಡು ಬಂದ ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ ಎಂಬ ಹೇಳಿಕೆ ನೀಡಿರುವುದು ವಿಷಾದಕರ ಸಂಗತಿ ಎಂದು ಅವರು ಟೀಕಿಸಿದರು. ಇಂದಿನ ರಾಜಕೀಯದಲ್ಲಿ ಸಾಮಾನ್ಯ ಹಿನ್ನೆಲೆಯ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ಅನ್ಯಾಯಕರ ಮಾರ್ಗಗಳಿಂದ ಮಾತ್ರ ಅವಕಾಶಗಳು ದೊರಕುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರು ಕನ್ನಡದ ಖ್ಯಾತ ಮುಸ್ಲಿಂ ಸಾಹಿತಿಗಳಾದ ಸಾ.ರಾ. ಅಬೂಬಕರ್, ಬಾನು ಮುಸ್ತಾಕ್ ಹಾಗೂ ಡಾ. ಶರೀಫಾ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಿ, ಇಂತಹ ಮಹಾನ್ ಚಿಂತಕರು ಮತ್ತು ಸಾಹಿತಿಗಳನ್ನು ಸಮಾಜ ಗುರುತಿಸಬೇಕು ಎಂದು ಹೇಳಿದರು.

“ರಾಜಕೀಯಕ್ಕೆ ಹೆಣ್ಣು ಬಂದರೆ ಸಮಾಜಕ್ಕೆ ಕಣ್ಣು ಬಂದಂತೆ” ಎಂದು ಹೇಳಿದ ಅವರು, ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಭಾಗವಹಿಸಿ ಪ್ರಾಮಾಣಿಕ ರಾಜಕೀಯ ಚಳುವಳಿಗಳಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಚಿಂತಕರಾದ ಡಾ. ಶರೀಫಾ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್, ಕಾರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಸಂಘಟನಾ ಕಾರ್ಯದರ್ಶಿ ರಘುನಂದನ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆಶಾ ವೀರೇಶ್, ರಾಜ್ಯ ಕಾರ್ಯದರ್ಶಿ ಇಂದಿರಾ ರೆಡ್ಡಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

LEAVE A REPLY

Please enter your comment!
Please enter your name here