
ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು, ಅರಿವು ಬೋಧಿ ಪ್ರಕಾಶನ
ಒಂದು ಚಿಕ್ಕ ಹಳ್ಳಿಯಲ್ಲಿ ಚಿನ್ನು ಎಂಬ ಹುಡುಗ ಇದ್ದ. ಅವನು ತುಂಬಾ ಒಳ್ಳೆಯ ಮನಸ್ಸಿನವನು, ಆದರೆ ಒಂದು ದೊಡ್ಡ ದೋಷ ಇತ್ತು — ಅವನಿಗೆ ಸಮಯಪ್ರಜ್ಞೆ ಇರಲಿಲ್ಲ. ಎಲ್ಲ ಕೆಲಸವನ್ನೂ “ನಾಳೆ ಮಾಡ್ತೀನಿ” ಎಂದು ಮುಂದೂಡುತ್ತಿದ್ದ.
ಒಂದು ದಿನ ಅವನ ಗುರು ಅವನಿಗೆ ಹೇಳಿದರು: “ಚಿನ್ನು, ಜೀವನದಲ್ಲಿ ಗೆಲ್ಲಬೇಕು ಅಂದ್ರೆ ಕಾಲದ ಜೊತೆ ಓಡಬೇಕು. ಇಲ್ಲದಿದ್ದರೆ ಕಾಲ ನಮ್ಮನ್ನು ಬಿಟ್ಟು ಹೋಗುತ್ತದೆ.” ಆದರೂ ಚಿನ್ನು ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಒಮ್ಮೆ ಶಾಲೆಯಲ್ಲಿ ದೊಡ್ಡ ಸ್ಪರ್ಧೆ ನಡೆಯಿತು. ಕಥೆ ಬರೆಯುವ ಸ್ಪರ್ಧೆ. ಚಿನ್ನು ಕೂಡ ಭಾಗವಹಿಸಲು ನಿರ್ಧರಿಸಿದ. ಆದರೆ ಅಭ್ಯಾಸ ಮಾಡುವ ಬದಲು ಆಟ ಆಡುತ್ತಾ ಸಮಯ ಕಳೆಯುತ್ತಿದ್ದ. “ಇನ್ನೂ ಸಮಯ ಇದೆ” ಎಂದುಕೊಂಡ.
ಸ್ಪರ್ಧೆಯ ದಿನ ಬಂದಾಗ, ಚಿನ್ನು ಕಥೆ ಬರೆಯಲು ಕುಳಿತ. ಆದರೆ ಅವನಿಗೆ ಸರಿಯಾಗಿ ಏನೂ ಬರಲಿಲ್ಲ. ಅವನ ಸ್ನೇಹಿತರು ಎಲ್ಲರೂ ಚೆನ್ನಾಗಿ ತಯಾರಿ ಮಾಡಿಕೊಂಡಿದ್ದರು. ಅವರು ಬಹುಮಾನ ಪಡೆದರು. ಚಿನ್ನು ಮಾತ್ರ ಸೋತು ಕಣ್ಣೀರು ಹಾಕಿದ.
ಆ ಸಮಯದಲ್ಲಿ ಅವನ ಹತ್ತಿರಕ್ಕೆ ಗುರು ಬಂದು ನಿಧಾನವಾಗಿ ಹೇಳಿದರು: “ಮಗನೇ, ಸೋಲಿನ ದೊಡ್ಡ ಕಾರಣ ಸಮಯಪ್ರಜ್ಞೆಯ ಕೊರತೆ. ಆದರೆ ಇದರಿಂದ ಕಲಿತರೆ ಈ ಸೋಲೂ ಗೆಲುವಾಗಬಹುದು.”
ಆ ಮಾತು ಚಿನ್ನುವಿನ ಹೃದಯಕ್ಕೆ ತಾಕಿತು. ಆ ದಿನದಿಂದ ಅವನು ನಿರ್ಧರಿಸಿದ —“ನಾನು ಕಾಲದ ಜೊತೆ ಓಡುತ್ತೇನೆ.”
ಅವನು ಪ್ರತಿದಿನ ಸಮಯಕ್ಕೆ ಓದುತ್ತಿದ್ದ, ಅಭ್ಯಾಸ ಮಾಡುತ್ತಿದ್ದ. ತನ್ನ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡ. ನಿಧಾನವಾಗಿ ಅವನು ಬದಲಾದ.
ಕೆಲವು ತಿಂಗಳುಗಳ ನಂತರ ಮತ್ತೆ ಸ್ಪರ್ಧೆ ನಡೆಯಿತು. ಈ ಬಾರಿ ಚಿನ್ನು ಆತ್ಮವಿಶ್ವಾಸದಿಂದ ಕಥೆ ಬರೆದ. ಈ ಬಾರಿ ಮೊದಲ ಬಹುಮಾನ ಅವನದ್ದೇ ಆಯಿತು.
ಚಿನ್ನು ಸಂತೋಷದಿಂದ ಗುರುಗಳತ್ತ ನೋಡಿದ. ಗುರು ನಗುಮುಖದಿಂದ ಹೇಳಿದರು: “ಯಾವುದು ಸಾಧ್ಯವೋ ಅದನ್ನು ಮಾಡಲು ಶಕ್ತಿ ಬೇಕು. ಯಾವುದು ಅಸಾಧ್ಯವೋ ಅದನ್ನು ಮಾಡಲು ನಂಬಿಕೆ ಮತ್ತು ವಿಶ್ವಾಸ ಬೇಕು.”
ಆ ದಿನ ಚಿನ್ನು ಅರಿತುಕೊಂಡ. ನಮ್ಮ ಶಕ್ತಿಯ ಮೇಲೆ ನಂಬಿಕೆ ಇದ್ದರೆ ಯಾವುದೂ ಅಸಾಧ್ಯವಲ್ಲ.
ನೀತಿ: ಸಮಯದ ಬೆಲೆ ಅರಿತವನೇ ಜೀವನದಲ್ಲಿ ನಿಜವಾದ ಗೆಲುವು ಪಡೆಯುತ್ತಾನೆ.





