ಗ್ರೇಟರ್ ಬೆಂಗಳೂರು: 369 ವಾರ್ಡ್‌ಗಳಿಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

0
25
Advertisement

ಬೆಂಗಳೂರು, ಮಾ.09: ನಗರದ ಐದು ನಗರ ಪಾಲಿಕೆಗಳನ್ನು ಒಳಗೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 369 ವಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಶನಿವಾರ ರಾತ್ರಿ ಪ್ರಕಟಿಸಿದೆ.

ಅಂತಿಮ ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ. ಈ ಹಿಂದೆ ಪ್ರಕಟಿಸಲಾಗಿದ್ದ ಕರಡು ಮೀಸಲಾತಿ ಪಟ್ಟಿಗೆ ಬಂದಿದ್ದ ನೂರಾರು ಆಕ್ಷೇಪಣೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

ಒಟ್ಟು 369 ವಾರ್ಡ್‌ಗಳ ಪೈಕಿ 176 ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕರಡು ಪಟ್ಟಿಯಲ್ಲಿ ಕಂಡುಬಂದಿದ್ದ ಅಸಮತೋಲನವನ್ನು ಸರಿಪಡಿಸಿ ಮೀಸಲಾತಿಯನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮದಿಂದ ಬಹುಕಾಲದಿಂದ ಮುಂದೂಡಿಕೆಯಾಗಿದ್ದ ನಗರ ಪಾಲಿಕೆ ಚುನಾವಣೆ ನಡೆಸುವ ಪ್ರಕ್ರಿಯೆಗೆ ಮತ್ತೊಂದು ಹೆಜ್ಜೆ ಇಡಲಾಗಿದೆ. ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಮುಂದೆ ಜೂನ್‌ 30ರೊಳಗೆ ಮಹಾನಗರ ಪಾಲಿಕೆ ಚುನಾವಣೆಗಳನ್ನು ನಡೆಸುವುದಾಗಿ ಭರವಸೆ ನೀಡಿತ್ತು.

ಅಂತಿಮ ಪಟ್ಟಿಯ ಪ್ರಕಾರ 198 ವಾರ್ಡ್‌ಗಳು ಸಾಮಾನ್ಯ ವರ್ಗಕ್ಕೆ, 43 ವಾರ್ಡ್‌ಗಳು ಪರಿಶಿಷ್ಟ ಜಾತಿಗೆ, 7 ವಾರ್ಡ್‌ಗಳು ಪರಿಶಿಷ್ಟ ಪಂಗಡಕ್ಕೆ, 97 ವಾರ್ಡ್‌ಗಳು ಹಿಂದುಳಿದ ವರ್ಗ ‘ಎ’ಗೆ ಹಾಗೂ 24 ವಾರ್ಡ್‌ಗಳು ಹಿಂದುಳಿದ ವರ್ಗ ‘ಬಿ’ಗೆ ಮೀಸಲಿಡಲಾಗಿದೆ.

2011ರ ಜನಗಣತಿ ಆಧರಿಸಿ ಜನವರಿ 8ರಂದು ವಾರ್ಡ್‌ವಾರು ಕರಡು ಮೀಸಲು ಪಟ್ಟಿ ಪ್ರಕಟಿಸಲಾಗಿದ್ದು, ಜನವರಿ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬಳಿಕ ಆಕ್ಷೇಪಣೆಗಳನ್ನು ಪರಿಶೀಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.

Greater Bengaluru Governance Act, 2024 ಅನ್ವಯ ಸಮಿತಿ ಆಕ್ಷೇಪಣೆಗಳನ್ನು ಪರಿಶೀಲಿಸಿ, ಕೆಲವು ಸೂಚನೆಗಳನ್ನು ಪರಿಗಣಿಸಿ ಅಗತ್ಯ ಬದಲಾವಣೆಗಳನ್ನು ಮಾಡಿದೆ. ನಂತರ ಸಮಿತಿ ಶಿಫಾರಸು ಮಾಡಿದ ಅಂತಿಮ ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here