ಟಿ20 ವಿಶ್ವಕಪ್ ಭಾರತದ ಮಡಿಲಿಗೆ; ಮೂರನೇ ಭಾರಿ ವಿಶ್ವ ಚಾಂಪಿಯನ್‌!

0
31
Advertisement

ಅಹಮದಾಬಾದ್, ಮಾ.08: ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಮೂರು ಸಲ ಟಿ20 ವಿಶ್ವಕಪ್ ತನ್ನದಾಗಿಸಿ ಕೊಂಡ ಮೊದಲ ದೇಶ ಭಾರತ ಎಂಬ ದಾಖಲೆ ಬರೆದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮಗ್ರ ಪ್ರದರ್ಶನ ನೀಡಿದ ಭಾರತ ತಂಡ ಫೈನಲ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿರ್ದಿಷ್ಟ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಗಳ ಭಾರೀ ಮೊತ್ತ ಕಲೆಹಾಕಿತು. ತಂಡದ ಪರ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಜೊತೆಗೆ ಇಶಾನ್ ಕಿಶನ್ 54 ರನ್ ಹಾಗೂ ಅಭಿಷೇಕ್ ಶರ್ಮಾ 52 ರನ್ ಗಳಿಸಿ ತಂಡದ ಮೊತ್ತವನ್ನು ಗಟ್ಟಿಗೊಳಿಸಿದರು.

256 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಎದುರಾಳಿ ಬ್ಯಾಟರ್‌ಗಳಿಗೆ ಸವಾಲಾಯಿತು. ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡ ಕಿವೀಸ್ ತಂಡ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು

ಈ ಮೂಲಕ ಭಾರತ ತಂಡ 96 ರನ್‌ಗಳ ಭರ್ಜರಿ ಅಂತರದಲ್ಲಿ ಜಯ ಸಾಧಿಸಿ ಟಿ20 ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಭಾರತದ ಸಮಗ್ರ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here