
ಬೆಂಗಳೂರು, ಮಾ.10: ನಾಡಿನ ಸಾಂಸ್ಕೃತಿಕ ಚಳುವಳಿಯ ಪ್ರಮುಖ ಸಂಸ್ಥೆಯಾದ ಹಂಸಜ್ಯೋತಿ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಹಂಸ ಸಮ್ಮಾನ್–2026’ ಪ್ರಶಸ್ತಿಗೆ ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಬಿಜ್ಜವರ ಎಚ್. ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 16, 2026ರಂದು ಸಂಜೆ 4.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆಯಲ್ಲಿ ನಡೆಯಲಿದೆ. ಹಂಸಜ್ಯೋತಿ ಟ್ರಸ್ಟ್‌ನ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಭಾಗವಾಗಿ ‘ಹಂಸ ಸಾಂಸ್ಕೃತಿಕ ಸಂಭ್ರಮ’ ಹೆಸರಿನಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕನ್ನಡದ ಹಳೆಯ ಚಲನಚಿತ್ರ ಗೀತೆಗಳ ಗಾಯನ, ಸಾಮೂಹಿಕ ಶಾಸ್ತ್ರೀಯ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ. ಇದೇ ವೇಳೆ ‘ಹಂಸ ಸಮ್ಮಾನ್–2026’ ಪ್ರಶಸ್ತಿಯನ್ನು ಬಿಜ್ಜವರ ಎಚ್. ಲೋಕೇಶ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡುತ್ತಿದೆ. ಕಾರ್ಯಕ್ರಮದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.





