ಮಾಧ್ಯಮಗಳು ಶೋಷಿತ ಸಮುದಾಯದ ಧ್ವನಿಯಾಗಲಿ: ಎಚ್. ವಿಶ್ವನಾಥ್

0
33
Advertisement

‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಬಿಡುಗಡೆ; ‘ದಿ ಫೈಲ್’ ಐದನೇ ವರ್ಷದ ಸಂಭ್ರಮ

ಬೆಂಗಳೂರು, ಮಾ.10: ಮಾಧ್ಯಮಗಳು ಶೋಷಿತ ಸಮುದಾಯದ ಧ್ವನಿಯಾಗಬೇಕು ಹಾಗೂ ಆಡಳಿತದಲ್ಲಿ ನಡೆಯುವ ಅಕ್ರಮ–ಭ್ರಷ್ಟಾಚಾರಗಳನ್ನು ನಿರ್ಭೀತಿಯಾಗಿ ಬಯಲಿಗೆಳೆಯುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ನಗರದ ಹರೇ ಕೃಷ್ಣ ರಸ್ತೆ, ಶಿವಾನಂದ ಸರ್ಕಲ್ ಸಮೀಪದಲ್ಲಿರುವ ‘ದಿ ಫೈಲ್’ ಕಚೇರಿಯಲ್ಲಿ ಮಾರ್ಚ್ 9ರಂದು ಸಂಜೆ 6.30ಕ್ಕೆ ಪಾರದರ್ಶಕ ಮೀಡಿಯಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಬ್ಬ ನಾಯಕ ಬೆಳೆಯಲು ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿರುತ್ತದೆ, ಜನಾದೇಶಕ್ಕೆ ಪೂರಕವಾಗಿ ಕೆಲಸ ಮಾಡುವ ಶಕ್ತಿ ಮಾಧ್ಯಮಗಳಿಗೆ ಇದೆ. ಸರ್ಕಾರವನ್ನು ಕಟ್ಟಿದ ಮಾಧ್ಯಮಗಳೇ ಕೆಲ ಸಂದರ್ಭಗಳಲ್ಲಿ ಅದನ್ನು ಉರುಳಿಸಿದ ಉದಾಹರಣೆಗಳೂ ಇವೆ. ಹೀಗಾಗಿ ಮಾಧ್ಯಮಗಳು ಶಕ್ತಿಶಾಲಿ. ನಿರ್ಭೀತ ತನಿಖಾ ವರದಿಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ‘ದಿ ಫೈಲ್’ ಮಾಡುತ್ತಿದೆ,” ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ವ್ಯವಹಾರಗಳತ್ತ ಗಮನ ಹರಿಸಿದರು. “ಕರ್ನಾಟಕ ಸರ್ಕಾರ ಎಲ್ಲದರ ಮೇಲೂ ತೆರಿಗೆ ವಿಧಿಸಿದೆ. ಆದರೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದ್ದರೂ ಸಮರ್ಪಕ ತೆರಿಗೆ ವ್ಯವಸ್ಥೆ ಕಾಣುತ್ತಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಸೈಟ್‌ಗಳ ಮಾರಾಟ ನಡೆಯುತ್ತಿದೆ. ಆದರೆ ಆ ವ್ಯವಹಾರಗಳಿಗೆ ಸಂಬಂಧಿಸಿದ ತೆರಿಗೆ ಎಲ್ಲಿದೆ? ಸಾಮಾನ್ಯ ಜನರಿಗೆ ವಿದ್ಯುತ್ ಬಿಲ್ ಸೇರಿದಂತೆ ಹಲವು ಸೇವೆಗಳ ಮೇಲೆ ಹೆಚ್ಚುವರಿ ಹೊರೆ ಹಾಕಲಾಗಿದೆ,” ಎಂದು ಟೀಕಿಸಿದರು.

ತನಿಖಾ ಪತ್ರಿಕೋದ್ಯಮಕ್ಕೆ ಸಮರ್ಪಿತವಾದ ‘ದಿ ಫೈಲ್’ ಐದು ವರ್ಷಗಳನ್ನು ಪೂರ್ಣಗೊಳಿಸಿ ಆರನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಲಘು ಉಪಹಾರದ ವ್ಯವಸ್ಥೆಯೂ ಮಾಡಲಾಗಿತ್ತು.

ಐದು ವರ್ಷದ ಪಯಣ ಸ್ಮರಣೆ

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಾರದರ್ಶಕ ಮೀಡಿಯಾ ಫೌಂಡೇಶನ್ ನಿರ್ದೇಶಕ ಮಲ್ಲಿಕಾರ್ಜುನ ಭಟ್ಟರಹಳ್ಳಿ, ಕಳೆದ ಐದು ವರ್ಷಗಳಲ್ಲಿ ‘ದಿ ಫೈಲ್’ ಯಾವುದೇ ಅಡೆತಡೆಗಳಿಲ್ಲದೆ ತನಿಖಾ ವರದಿಗಳನ್ನು ನಿರಂತರವಾಗಿ ಪ್ರಕಟಿಸುತ್ತಾ ಬಂದಿದೆ, ಸಮಾಜಮುಖಿ ವಿಷಯಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸಂಸ್ಥೆ ಇದೀಗ ಪ್ರಕಟಣಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ‘ನೇಗಿಲ ಯೋಗಿ’ ಎಂಬ ಅನುವಾದ ಕೃತಿಯನ್ನು ಪ್ರಕಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ‘ದಿ ಫೈಲ್’ ಕಳೆದ ಐದು ವರ್ಷಗಳಲ್ಲಿ ನಡೆಸಿದ ತನಿಖಾ ವರದಿಗಳ ಪಯಣವನ್ನು ಅವರು ಸ್ಮರಿಸಿದರು.

ಪತ್ರಿಕೆ ಸಮಾಜ ಜಾಗೃತಿಯ ಅಸ್ತ್ರ

ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಮಾತನಾಡಿ, ಪತ್ರಿಕೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಶಕ್ತಿಯುತ ಸಾಧನವಾಗಿವೆ ಎಂದು ಹೇಳಿದರು. “ಲೋಕಮಾನ್ಯ ತಿಲಕ್, ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವರು ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಚಳುವಳಿಗೆ ಪತ್ರಿಕೆಯನ್ನು ಒಂದು ಅಸ್ತ್ರವಾಗಿ ಬಳಸಿದರು. ಜನರಲ್ಲಿ ಜಾಗೃತಿ ಮೂಡಿಸಲು ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿದೆ,” ಎಂದು ಹೇಳಿದರು.

ಯಾವುದೇ ಆಮಿಷಗಳಿಗೆ ಒಳಗಾಗದೆ ನಿಖರ ಹಾಗೂ ವಸ್ತುನಿಷ್ಠ ತನಿಖಾ ವರದಿಗಳನ್ನು ನೀಡುವಲ್ಲಿ ಜಿ. ಮಹಾಂತೇಶ್ ಮುಂಚೂಣಿಯಲ್ಲಿದ್ದಾರೆ, ಮಹಾಂತೇಶ್ ಅವರು ಕೇವಲ ಪತ್ರಕರ್ತರಲ್ಲ, ಸಮಾಜಮುಖಿ ಚಿಂತನೆಯ ಕಾರ್ಯಕರ್ತರೂ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ವೃತ್ತಿನಿಷ್ಠ ಪತ್ರಿಕೋದ್ಯಮ ಅಪರೂಪವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವೃತ್ತಿನಿಷ್ಠ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ‘ದಿ ಫೈಲ್’ ಸಂಪಾದಕ ಜಿ. ಮಹಾಂತೇಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್, ಮಹಾಂತೇಶ್ ಅವರೊಂದಿಗೆ ಸುಮಾರು 25 ವರ್ಷಗಳ ಪರಿಚಯದ ನೆನಪುಗಳನ್ನು ಬಿಚ್ಚಿಟ್ಟರು.

“ಮೊದಲಿಗೆ ಸಹೋದ್ಯೋಗಿಗಳಾಗಿದ್ದ ನಾವು ನಂತರ ಸ್ನೇಹಿತರಾದೆವು. ಇಂದಿನ ದಿನಗಳಲ್ಲಿ ಬಹುತೇಕ ಪತ್ರಕರ್ತರು ಆಸ್ಥಾನ ವಿದೂಷಕರಾಗಿರುವ ಪರಿಸ್ಥಿತಿ ಕಂಡು ಬರುತ್ತಿದೆ. ಆದರೆ ಮಹಾಂತೇಶ್ ಅವರು ವೃತ್ತಿನಿಷ್ಠ ಪತ್ರಿಕೋದ್ಯಮದ ಪ್ರತಿನಿಧಿಯಾಗಿ ಕಾಣಿಸುತ್ತಿದ್ದಾರೆ. ನಿಜವಾದ ಪ್ರೊಫೆಶನಲ್ ಪತ್ರಕರ್ತ ಹೇಗಿರಬೇಕು ಎಂಬುದನ್ನು ಅವರಲ್ಲಿ ನೋಡಬಹುದು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಂದೇ ಭಾರತಂ ಫೌಂಡೇಶನ್‌ನ ಬಿಜ್ಜವರ ಲೋಕೇಶ್, ಮಹಾಂತೇಶ್ ಅವರ ಪರಿಶ್ರಮ ಮತ್ತು ನಿಷ್ಠೆಯನ್ನು ಕೊಂಡಾಡಿದರು.

“ನಾನು ಹೇಳುವ ಮಾತು ಕೇಳಿದರೆ ಅವರಿಗೆ ಸ್ವಲ್ಪ ಕಸಿವಿಸಿಯಾಗಬಹುದು. ಆದರೆ ನಾನು ಹೇಳುವುದೆಲ್ಲ ನೈಜ ಸತ್ಯ. ಮಹಾಂತೇಶ್ ಅವರು ನಂದಿನಿ ಲೇಔಟ್ ಹತ್ತಿರ ವಾಸಿಸುತ್ತಾರೆ. ಪ್ರತಿದಿನ ಬೆಳಗ್ಗೆ ಬಸ್ ಹತ್ತಿಯೇ ಕಚೇರಿಗೆ ಬರುತ್ತಾರೆ. ಇಲ್ಲಿ ಬರಲು ಸುಮಾರು ಒಂದು ಗಂಟೆ ಸಮಯ ಹಿಡಿಯುತ್ತದೆ. ಬೆಳಿಗ್ಗೆ ತಿಂದ ಟಿಫಿನ್‌ನ್ನೇ ಮಧ್ಯಾಹ್ನ ಊಟಕ್ಕಾಗಿ ಬುತ್ತಿಯಾಗಿ ತರುತ್ತಾರೆ. ಮಧ್ಯಾಹ್ನ ಒಂದು ಗಂಟೆ ಅಥವಾ ಒಂದು ಇಪ್ಪತ್ತು ವೇಳೆಗೆ ಕಚೇರಿಯಿಂದ ವಿಧಾನ ಸೌಧ ಕಡೆಗೆ ಹೊರಡುತ್ತಾರೆ, ಮಳೆ ಬಂದರೂ, ಬಿರುಗಾಳಿ ಬಂದರೂ, ನಗರದಲ್ಲಿ ಸ್ಟ್ರೈಕ್ ನಡೆದರೂ ಅವರ ದಿನಚರಿ ಎಂದಿಗೂ ಬದಲಾಗಿಲ್ಲ” ಎಂದು ಲೋಕೇಶ್ ಹೇಳಿದರು.

“ಇಂತಹ ಸಂದರ್ಭಗಳಲ್ಲಿ ನಾನು ಮಾಡುತ್ತಿರುವ ಒಂದು ಸಣ್ಣ ಸೇವೆ ಅಂದ್ರೆ, ಕೆಲವೊಮ್ಮೆ ಅವರನ್ನು ಕಚೇರಿಯಿಂದ ವಿಧಾನ ಸೌಧ- ಮನೆ- ಇನ್ನಿತರ ಸ್ಥಳಗಳಿಗೆ ಕೊಂಡೊಯ್ಯುವುದು. ಅದಕ್ಕೆ ಅವಕಾಶ ಕೊಟ್ಟಿರುವ ಮಹಾಂತೇಶ್ ಅವರಿಗೆ ನಾನು ಧನ್ಯವಾದ ಹೇಳಬೇಕು. ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ಅವರ ನಿರ್ಭೀತ ತನಿಖಾ ವರದಿಗಳಿಂದ ಅನೇಕ ಸತ್ಯಗಳು ಜನರ ಮುಂದೆ ಬಟಾಬಯಲಾಗುತ್ತಿವೆ. ಇಂತಹ ಸಮಾಜಮುಖಿ ವರದಿಗಳು ಇನ್ನಷ್ಟು ಪ್ರಖರವಾಗಿ ಬರಲಿ ಎಂದು ಹಾರೈಸುತ್ತೇನೆ,” ಎಂದರು.

ಕಾರ್ಯಕ್ರಮದಲ್ಲಿ ‘ದಿ ಫೈಲ್’ ಓದುಗ ಮಂಜುನಾಥ ಚೌಕಿ ಎಐ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ ಹಾಡನ್ನು ಪ್ರದರ್ಶಿಸಲಾಯಿತು. ಬಳಿಕ ವಿಧಾನಸಭೆಯಲ್ಲಿ ‘ದಿ ಫೈಲ್’ ವರದಿಗಳ ಆಧಾರದ ಮೇಲೆ ಸರ್ಕಾರದ ಗಮನ ಸೆಳೆದ ಘಟನೆಗಳ ವೀಡಿಯೋವನ್ನು ಟಿವಿ ಪರದೆಯಲ್ಲಿ ತೋರಿಸಲಾಯಿತು. ಆರ್. ಆಶೋಕ್ ಮತ್ತು ಸುರೇಶ್ ಕುಮಾರ್ ಅವರು ಸದನದಲ್ಲಿ ‘ದಿ ಫೈಲ್’ ವರದಿಗಳನ್ನು ಉಲ್ಲೇಖಿಸಿದ ಸಂದರ್ಭಗಳೂ ಪ್ರದರ್ಶಿಸಲಾಯಿತು.

ನನ್ನದು ಮಾಧ್ಯಮ ಪಂಥ

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಜಿ. ಮಹಾಂತೇಶ್, ‘ದಿ ಫೈಲ್’ ಆರಂಭವಾದ ಹಿನ್ನೆಲೆ, ತನಿಖಾ ಪತ್ರಿಕೋದ್ಯಮದ ಸಂಕಷ್ಟಗಳು ಹಾಗೂ ದಿನನಿತ್ಯ ಎದುರಿಸುವ ಸವಾಲುಗಳ ಬಗ್ಗೆ ವಿವರಿಸಿದರು.

ರಾಜ್ಯದಲ್ಲಿ ತನಿಖಾ ವರದಿಯನ್ನು ಪ್ರಕಟಿಸುತ್ತಿದ್ದ ಮೊದಲ ಪತ್ರಿಕೆಯೆಂದರೆ ‘ಲಂಕೇಶ್ ಪತ್ರಿಕೆ’. ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಹೆಜ್ಜೆಯನ್ನಿಡುತ್ತಿದ್ದೇವೆ ಎಂದರು.

“ನಾನು ಯಾವುದೇ ಪಂಥ ಅಥವಾ ಪಕ್ಷಕ್ಕೆ ಸೀಮಿತನಲ್ಲ. ನನ್ನದು ಮಾಧ್ಯಮ ಪಂಥ. ಯಾವುದೇ ಪಕ್ಷ ಅಥವಾ ಸಿದ್ಧಾಂತಗಳಿಗೆ ಒಳಗಾಗದೆ ಪತ್ರಿಕಾ ಸಿದ್ಧಾಂತದ ಆಧಾರದಲ್ಲೇ ಕೆಲಸ ಮಾಡುತ್ತಿದ್ದೇನೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಡುಗಡೆಯಾದ ‘ಭೂ ಕಬಳಿಕೆ ಸಿದ್ಧಾಂತ’ ಕೃತಿಯ ಗೌರವ ಪ್ರತಿಗಳನ್ನು ಗಣ್ಯರಿಗೆ ವಿತರಿಸಲಾಯಿತು. ಮಾಧ್ಯಮ ಹಾಗೂ ಸಾಹಿತ್ಯ ವಲಯದ ಅನೇಕ ಗಣ್ಯರು, ಓದುಗರು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಶ್ವರ ಬೆಳ್ಳಿಕೇರೆಯವರು ಸ್ವಾಗತಿಸಿ, ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.

Advertisement

LEAVE A REPLY

Please enter your comment!
Please enter your name here