ನಾಳೆಯಿಂದ ಸರಕಾರಿ ವೈದ್ಯರ ರಾಜ್ಯದಾದ್ಯಂತ ಮುಷ್ಕರ ಎಚ್ಚರಿಕೆ; ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ: ಸರಕಾರದ ಭರವಸೆ!

0
21
Advertisement

ಬೆಂಗಳೂರು, ಮಾ.10: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ಕೆಜಿಎಂಒಎ) ಹಾಗೂ ಆರೋಗ್ಯ ಇಲಾಖೆಯ ಇತರ ನೌಕರರ ಸಂಘಗಳು ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಅವರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ರಾಜ್ಯಾದ್ಯಂತ ಹಂತ ಹಂತವಾಗಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಮಾರ್ಚ್ 11ರಿಂದ ಎಲ್ಲಾ ಹೊರರೋಗಿ ವಿಭಾಗ (ಒಪಿಡಿ) ಸೇವೆಗಳನ್ನು ಬಂದ್ ಮಾಡುವುದಾಗಿ ವೈದ್ಯರು ಘೋಷಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್ 16ರಿಂದ ತುರ್ತು ಸೇವೆಗಳು ಸೇರಿದಂತೆ ಎಲ್ಲಾ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, “ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ನಾವು ಈಗಾಗಲೇ ಎರಡು ಬಾರಿ ಚರ್ಚೆ ನಡೆಸಿದ್ದೇವೆ. ನಿನ್ನೆ ನಮ್ಮ ಆಯುಕ್ತರ ಮೂಲಕ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅವರಿಗೆ ತಿಳಿಸಲಾಗಿದೆ” ಎಂದು ಹೇಳಿದರು.

ವೈದ್ಯರು ಎತ್ತಿರುವ ಬೇಡಿಕೆಗಳಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ವೃಂದ ಹಾಗೂ ನೇಮಕಾತಿ ಸಮಸ್ಯೆಗಳು, ಜೇಷ್ಠತಾ ಪಟ್ಟಿ, ಹಾಗೂ ಕಳೆದ ಕೌನ್ಸೆಲಿಂಗ್‌ನಲ್ಲಿ ಉಂಟಾದ ವ್ಯತ್ಯಾಸಗಳು ಪ್ರಮುಖವಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

“ಈ ಸಮಸ್ಯೆಗಳನ್ನು ಪರಿಹರಿಸುವ ದಿಶೆಯಲ್ಲಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಇನ್ನೂ ಕೆಲವು ವಿಷಯಗಳಿದ್ದು, ಅವುಗಳ ಕುರಿತು ಈಗಲೇ ಚರ್ಚಿಸಲು ಸಾಧ್ಯವಿಲ್ಲ. ಇಂದು ಮುಖ್ಯಮಂತ್ರಿಯವರೊಂದಿಗೆ ವೈದ್ಯರ ಪ್ರತಿನಿಧಿಗಳನ್ನು ಸಭೆಗೆ ಕರೆದಿದ್ದೇವೆ. ಇಲಾಖೆಯ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಮೂವರು ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೈದ್ಯರು ವಿವಿಧ ಬೇಡಿಕೆಗಳೊಂದಿಗೆ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಹೇಳಿದರು.

ಔಷಧಿಗಳ ಸಮರ್ಪಕ ಪೂರೈಕೆ, ವರ್ಗಾವಣೆ ನೀತಿ ಜಾರಿ ಮತ್ತು ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಬೇಡಿಕೆಗಳನ್ನು ವೈದ್ಯರು ಮುಂದಿಟ್ಟಿದ್ದಾರೆ ಎಂದು ಸಚಿವರು ವಿವರಿಸಿದರು.

Advertisement

LEAVE A REPLY

Please enter your comment!
Please enter your name here