ಪಾಟ್ನಾ, ಏ.14: ಬಿಹಾರದಲ್ಲಿ ದಶಕಗಳ ಕಾಲ ರಾಜಕೀಯವನ್ನು ಮುನ್ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಹೊಸ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿದೆ.
ನಿತೀಶ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಮ್ರಾಟ್ ಚೌಧರಿಯನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಅವರು ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ್ದ ನಿತೀಶ್ ಕುಮಾರ್ ಅವರು ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದ ಬಳಿಕ ಅವರು ಲೋಕಭವನಕ್ಕೆ ತೆರಳಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಅವರು, ಮುಂದಿನ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ರಾಜೀನಾಮೆಗೂ ಮುನ್ನ ಅವರು ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಸಚಿವರೊಂದಿಗೆ ತಮ್ಮ ಕೊನೆಯ ಸಚಿವ ಸಂಪುಟ ಸಭೆಗೆ ಅಧ್ಯಕ್ಷತೆ ವಹಿಸಿದ್ದರು.
ಯುಗಾಂತ್ಯಕ್ಕೆ ತೆರೆ
ಸುಮಾರು ಎರಡು ದಶಕಗಳ ಕಾಲ 10 ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ಅವರ ರಾಜೀನಾಮೆ, ರಾಜ್ಯ ರಾಜಕೀಯದಲ್ಲಿ ಒಂದು ಯುಗಾಂತ್ಯದಂತೆ ಪರಿಗಣಿಸಲಾಗುತ್ತಿದೆ. ಅವರ ನಾಯಕತ್ವದಲ್ಲಿ ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿದ್ದವು.
ರಾಷ್ಟ್ರ ರಾಜಕೀಯದತ್ತ ಹೆಜ್ಜೆ
ನಿತೀಶ್ ಕುಮಾರ್ ಅವರ ರಾಜೀನಾಮೆಯ ಪ್ರಮುಖ ಕಾರಣವಾಗಿ ಅವರು ರಾಷ್ಟ್ರ ರಾಜಕೀಯದತ್ತ ಹೆಚ್ಚು ಗಮನ ಹರಿಸಲು ತೆಗೆದುಕೊಂಡ ನಿರ್ಧಾರವೆಂದು ಹೇಳಲಾಗುತ್ತಿದೆ. ರಾಜ್ಯ ರಾಜಕಾರಣದಿಂದ ಹೊರಬಂದು ಕೇಂದ್ರ ಮಟ್ಟದಲ್ಲಿ ಸಕ್ರಿಯ ಪಾತ್ರವಹಿಸಲು ಅವರು ಮುಂದಾಗಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ.
ಬಿಹಾರದಲ್ಲಿ ನಡೆದ ಈ ತ್ವರಿತ ರಾಜಕೀಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.




