ಬೆಂಗಳೂರು, ಏ.14: ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗಾಗಿ 2026-27ನೇ ಸಾಲಿನ ಶೈಕ್ಷಣಿಕ ಅವಧಿ ಮತ್ತು ರಜಾ ಅವಧಿಯನ್ನು ನಿಗದಿಪಡಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಒಟ್ಟು ಕಾರ್ಯದಿನಗಳು, ರಜಾದಿನಗಳು ಹಾಗೂ ಶೈಕ್ಷಣಿಕ ಚಟುವಟಿಕೆ ಅವಧಿಗಳನ್ನು ಪರಿಗಣಿಸಿ ಕಾರ್ಯಸೂಚಿ ರೂಪಿಸಲಾಗಿದೆ. ಈ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮೇ 29ರಿಂದ ಹೊಸ ಶೈಕ್ಷಣಿಕ ವರ್ಷ
2026-27ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29ರಂದು ಆರಂಭವಾಗಲಿದೆ. ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದ್ದು, ದಸರಾ ರಜೆ ಅಕ್ಟೋಬರ್ 3ರಿಂದ 21ರವರೆಗೆ ಇರಲಿದೆ. ಎರಡನೇ ಅವಧಿ ಅಕ್ಟೋಬರ್ 22ರಿಂದ 2027ರ ಏಪ್ರಿಲ್ 10ರವರೆಗೆ ಮುಂದುವರಿಯಲಿದೆ.
ಒಟ್ಟು 365 ದಿನಗಳಲ್ಲಿ 119 ರಜಾದಿನಗಳು ಹಾಗೂ 245 ಕರ್ತವ್ಯದ ದಿನಗಳನ್ನು ನಿಗದಿಪಡಿಸಲಾಗಿದೆ. ಈ 245 ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ (ಎಫ್‌ಎ, ಎಸ್‌ಎ) ಕಾರ್ಯಗಳಿಗೆ 26 ದಿನಗಳು, ಪಕ್ಷೇತರ ಚಟುವಟಿಕೆಗಳಿಗೆ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆಗೆ 10 ದಿನಗಳು, ಸ್ಥಳೀಯ ರಜೆಗಳಿಗೆ 4 ದಿನಗಳು ಮತ್ತು ಬೋಧನಾ-ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿಡಲಾಗಿದೆ.
ಇದರ ಜೊತೆಗೆ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವದಂತಹ ಚಟುವಟಿಕೆಗಳನ್ನು ಎಂದಿನಂತೆ ನಡೆಸುವಂತೆ ಸೂಚಿಸಲಾಗಿದೆ.
ದಾಖಲಾತಿ ಪೂರ್ಣಗೊಳಿಸಲು ಗಡುವು
ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಶಾಲೆ ಬಿಟ್ಟಿರುವ 6ರಿಂದ 18 ವರ್ಷದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಉದ್ದೇಶದಿಂದ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಇಲಾಖೆ ನಿರ್ದೇಶಿಸಿದೆ.
ಈ ಕ್ರಮವು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




