ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ; ತೃತೀಯ ಭಾಷೆ ಕುರಿತ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

0
2

ಬೆಂಗಳೂರು, ಏ.21: ಎಸ್‌ಎಸ್‌ಎಲ್‌ಸಿ ಮೂರನೇ ಭಾಷಾ ಮೌಲ್ಯಮಾಪನ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ತಿರಸ್ಕರಿಸಿ, ತನ್ನ ಹಿಂದಿನ ಆದೇಶವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಈ ಮೂಲಕ ಸರ್ಕಾರಕ್ಕೆ ಮುಖಭಂಗವಾಗಿದ್ದು, ಗ್ರೇಡಿಂಗ್ ಪದ್ಧತಿ ಬದಲಾವಣೆಗೆ ನ್ಯಾಯಾಲಯ ಸ್ಪಷ್ಟ ಬ್ರೇಕ್ ಹಾಕಿದೆ.

ನ್ಯಾಯಮೂರ್ತಿ ಇ.ಎಸ್. ಇಂಡಿರೇಶ್ ಅವರು, ಪರೀಕ್ಷೆಗಳ ಪ್ರಕಟಣೆ ದಿನಾಂಕದ ವೇಳೆಗೆ ಜಾರಿಯಲ್ಲಿದ್ದ ನಿಯಮಾವಳಿಗಳನ್ನೇ ಅನುಸರಿಸಬೇಕು ಎಂದು ಪುನರುಚ್ಚರಿಸಿದರು. ಹೊಸ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾದ ಕ್ರಮವನ್ನು ನ್ಯಾಯಾಲಯ ಒಪ್ಪಲಿಲ್ಲ.

ಈ ಹಿಂದೆ ಏಪ್ರಿಲ್ 15ರಂದು ನೀಡಿದ್ದ ಆದೇಶದಲ್ಲಿ, ಪ್ರಕಟಣೆ ದಿನಾಂಕದ ವೇಳೆಗೆ ಜಾರಿಯಲ್ಲಿದ್ದ ನಿಯಮಗಳ ಪ್ರಕಾರವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು. ಸರ್ಕಾರ ಅದರಲ್ಲಿ ಬದಲಾವಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ತಳ್ಳಿ ಹಾಕಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಹೇಳಿಕೆಯಿಂದ ಆತಂಕಗೊಂಡ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ಮೇರೆಗೆ ವಿಚಾರಣೆ ನಡೆದಿದ್ದು, ನ್ಯಾಯಾಲಯ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪು ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಜಾರಿಯಲ್ಲಿದ್ದ ನಿಯಮಗಳ ಪ್ರಕಾರವೇ ಮೌಲ್ಯಮಾಪನ ನಡೆಯಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅದನ್ನು ದಾಖಲಿಸಿಕೊಂಡ ಹೈಕೋರ್ಟ್, ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಅದೇ ನಿಯಮಾವಳಿಗಳ ಪ್ರಕಾರ ಮೌಲ್ಯಮಾಪನ ಮಾಡುವಂತೆ ಮರುನಿರ್ದೇಶನ ನೀಡಿದೆ.

LEAVE A REPLY

Please enter your comment!
Please enter your name here