ಬಳ್ಳಾರಿ, ಏ.14: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ಬಳ್ಳಾರಿ ನಗರದಲ್ಲಿ ಜಿಲ್ಲಾ ಅಂಬೇಡ್ಕರ್ ಸೇನೆಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಹೆಗಡೆ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಅಂಬೇಡ್ಕರ್ ಭವನದ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಜಯಂತಿಯ ಪ್ರಯುಕ್ತ ಬಳ್ಳಾರಿಯ ಗಾಂಧಿನಗರದಲ್ಲಿರುವ ಸೂರ್ಯ ನಿವಾಸ್ ವೃದ್ಧಾಶ್ರಮದಲ್ಲಿ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಶಿವಕುಮಾರ್ ಹೆಗಡೆ ಅವರು, “ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ; ಅವರು ಎಲ್ಲಾ ಜನಾಂಗಗಳ ನಾಯಕರಾಗಿದ್ದಾರೆ. ಅವರು ರಚಿಸಿದ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಹಕ್ಕುಗಳು ದೊರೆತಿವೆ. ಅದಕ್ಕಾಗಿ ಅವರ ಜಯಂತಿಯನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ,” ಎಂದು ಹೇಳಿದರು.
ಅಂಬೇಡ್ಕರ್ ಸೇನೆಯ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಹೋರಾಟಗಳನ್ನು ಮುಂದುವರಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಎನ್. ಸಂದೀಪ್, ಎಎಂ ನರೇಂದ್ರ ಕುಮಾರ್, ಯುವ ದಲಿತ ಮುಖಂಡರು, ಜಿಕೆ ಫೌಂಡೇಶನ್ ಸದಸ್ಯರು ಹಾಗೂ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




