ಕೈಬರಹದ ಮೌಲ್ಯ; ಅಕ್ಷರದೊಳಗಿನ ಆತ್ಮಕಥೆ!

0
14
Advertisement

ಲೇಖನ: ಶಿವಪ್ರಸಾದ್‌ ಮಣಿಯೂರು

ಇಂದು ವಿಶ್ವ ಕೈಬರಹ ದಿನ. ಒಬ್ಬರಿಂದ ಒಬ್ಬರಿಗೆ ಭಿನ್ನವಾಗುವ ಅಪರೂಪದ ಗುರುತು ಹೊಂದಿರುವುದು ಎಂದರೆ ಕೈಬರಹ. ಬೆರಳಚ್ಚಿನಂತೆ, ಕಣ್ಣಿನ ನೋಟದಂತೆ, ಪ್ರತಿಯೊಬ್ಬರ ಕೈಬರಹವೂ ಅವರದೇ ಆದ ವ್ಯಕ್ತಿತ್ವವನ್ನು ಹೊತ್ತು ತರುತ್ತದೆ. ಆದರೆ ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಕೈಬರಹವನ್ನು ಹುಡುಕುವ ಪರಿಸ್ಥಿತಿ ಬಂದೊದಗಿದೆ. ಕೀಲಿಮಣೆ, ಟಚ್‌ಸ್ಕ್ರೀನ್‌, ಇಮೇಲ್‌–ಇವೆಲ್ಲದರ ನಡುವೆ ಅಕ್ಷರಗಳ ಸೌಂದರ್ಯ ನಿಧಾನವಾಗಿ ಮಂಕಾಗುತ್ತಿದೆ. ಆದರೂ ಕೈಬರಹಕ್ಕೊಂದು ಮೌಲ್ಯ ಎಂದಿಗೂ ಇದ್ದೇ ಇದೆ; ಅದನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ.

ಕೆಲವರ ಕೈಬರಹ ನೋಡಿದರೆ ಓದಬೇಕೆನಿಸುತ್ತದೆ. ಮುತ್ತು ಪೋಣಿಸಿದಂತೆ ಜೋಡಿಸಿಕೊಂಡ ಅಕ್ಷರಗಳು ಕಣ್ಣಿಗೆ ಆಕರ್ಷಕವೆನಿಸುತ್ತವೆ. ನೋಡುತ್ತಾ ಹೋದಂತೆ ಇನ್ನಷ್ಟು ರುಚಿಸುತ್ತವೆ. ಆದರೆ ಎಲ್ಲರ ಕೈಬರಹವೂ ಹಾಗೇ ಇರಬೇಕೆಂದೇನಿಲ್ಲ. ಹಾಗೆಯೇ ನನ್ನ ಕೈಬರಹ ಇದಕ್ಕೆ ಅಕ್ಷರಶಃ ತದ್ವಿರುದ್ಧ! ನನ್ನ ಅಕ್ಷರಗಳನ್ನು ನೋಡಿ ದುರುಗುಟ್ಟಿದವರೂ ಇದ್ದಾರೆ. ಪತ್ರಿಕಾ ವರದಿಗಾರಿಕೆಯಲ್ಲಿ ತೊಡಗಿದ್ದಾಗ, ಹೆಸರಾಂತ ಪತ್ರಿಕೆಯಲ್ಲಿರುವವನೇ ಇಂತಹ ಅಕ್ಷರ ಬರೆಯುತ್ತಾನಾ ಎಂಬ ಪ್ರಶ್ನಾರ್ಥಕ ನೋಟ ಬೀರಿದವರಿದ್ದಾರೆ. ಕಲಿಸುವ ಸಂದರ್ಭದಲ್ಲೂ ಬೋರ್ಡ್ ಮೇಲೆ ಬರೆದ ಅಕ್ಷರಗಳನ್ನು ನೋಡಿ ನಕ್ಕ ವಿದ್ಯಾರ್ಥಿಗಳಿದ್ದಾರೆ.

ಕೆಲವರು ತಮಾಷೆ ಮಾಡುತ್ತಾರೆ, “ಇದನ್ನು ಓದಲು ಬ್ರಹ್ಮನೇ ಬರಬೇಕು” ಎಂದು. ಪುಟದುದ್ದಕ್ಕೂ ಓರೆಕೋರೆ ಅಕ್ಷರಗಳು! ಹೌದು, ನನ್ನ ಅಕ್ಷರಗಳು ಮುಖಪುಟವಿಲ್ಲದ ಪುಸ್ತಕದಂತೆ. ನೋಡಲು ಚೆಂದವಿಲ್ಲದಿರಬಹುದು, ಆದರೆ ಅದರೊಳಗೆ ಅರ್ಥವಿರುತ್ತದೆ; ಪುಟಿಯುವಷ್ಟು ಮಾತುಗಳಿರುತ್ತವೆ; ವಾಡಿಕೆಯ ಛಂದಸ್ಸು ಇದ್ದೇ ಇರುತ್ತದೆ. ಆದರೆ ನೋಡುಗರಿಗೆ ಅದು ರುಚಿಸುವುದಿಲ್ಲ. ಏಕೆಂದರೆ ನಾವು ಮೊದಲ ನೋಟಕ್ಕೇ ಮಾರುಹೋಗುವ ಆಕರ್ಷಣೀಯ ಸಮಾಜದಲ್ಲಿ ಬದುಕುತ್ತಿದ್ದೇವೆ. ಬರಹ ಎಷ್ಟು ಮುಖ್ಯವೋ, ಅದನ್ನು ಓದಿಸುವಿಕೆಯೂ ಅಷ್ಟೇ ಮುಖ್ಯ.

ಆದರೆ ಕಂಪ್ಯೂಟರ್ ಯುಗದಲ್ಲಿ ಇದಕ್ಕೆ ಬಾಗಶಃ ತೆರೆ ಬಿದ್ದಂತಾಗಿದೆ. ಕೈಬರಹ ಈಗ ಕಾಣದ ಕೈಗಳ ಪಾಲಾಗಿದೆ. ಹೆಚ್ಚಾಗಿ ಅದು ರಫ್ ವರ್ಕ್‌ಗಳಲ್ಲಿ ಮಾತ್ರ ಉಳಿದಿದೆ. ಉಳಿದ ಎಲ್ಲವೂ ಟೈಪಿಂಗ್ ಮತ್ತು ಮೈಲಿಂಗ್. ಒಂದು ಕಾಲದಲ್ಲಿ ಪತ್ರಿಕೆಗಳಿಗೆ ಬರಹ ಕಳುಹಿಸಲು ಕೈಬರಹ ಕಾರಣದಿಂದ ಹಿಂಜರಿದ ದಿನಗಳಿವೆ. ಆದರೆ ಆಗಿನ ಮಾಧ್ಯಮದಲ್ಲಿ ಹೆಚ್ಚಿನವರು ಅಕ್ಷರಗಳ ಚೆಂದಕ್ಕಿಂತ ಬರಹದ ತೂಕಕ್ಕೆ ಮೌಲ್ಯ ನೀಡುತ್ತಿದ್ದರು ಎಂಬುದು ಸಮಾಧಾನ. ಸುಮಾರು 15 ವರ್ಷಗಳ ಹಿಂದೆ ‘ಸುಧಾ’ ಪತ್ರಿಕೆಗೆ ಕಳಿಸಿದ ಬರಹಕ್ಕೆ 300 ರೂಪಾಯಿ ಪ್ರೋತ್ಸಾಹನೀಯ ಸಂಭಾವನೆ ಸಿಕ್ಕದ್ದು ಅದಕ್ಕೆ ಸಾಕ್ಷಿ.

ಇಲ್ಲಿ ಗಮನಿಸಬೇಕಾದ ಸಂಗತಿ ಒಂದೇ, ಕೈಬರಹ ಅತ್ಯಂತ ಸುಂದರವಾಗಿರಬೇಕೆಂದಿಲ್ಲ. ಆದರೆ ಅದು ತಪ್ಪುಗಳಿಲ್ಲದೆ, ನೀಟಾಗಿರಬೇಕು. ಅದನ್ನೇ ನಾವು ಕಲಿಯಬೇಕು. ಸಾಹಿತ್ಯದ ಮೊದಲ ಮೆಟ್ಟಿಲು ಅಕ್ಷರಗಳ ಮೇಲಿನ ಪ್ರಭುತ್ವ. ಕೈಬರಹ ಮಾಯವಾಗುತ್ತಿರುವ ಈ ಕಾಲದಲ್ಲಿ, ಅದಕ್ಕೆ ವ್ಯಯಧಾನವಿಲ್ಲದ ಜನಾಂಗ ಬೆಳೆದರೂ, ಅಕ್ಷರಗಳೊಳಗಿನ ಆತ್ಮವನ್ನು ಮರೆತರೆ ನಷ್ಟ ನಮ್ಮದೇ. ವಿಶ್ವ ಕೈಬರಹ ದಿನ ನಮಗೆ ನೆನಪಿಸುವುದೇನೆಂದರೆ, ಕೈಬರಹ ಕೇವಲ ಅಕ್ಷರವಲ್ಲ, ಅದು ವ್ಯಕ್ತಿಯ ಬದುಕಿನ ಸಣ್ಣ ಆತ್ಮಕಥೆ. ಅದನ್ನು ಉಳಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಹೊಣೆ.

Advertisement

LEAVE A REPLY

Please enter your comment!
Please enter your name here