
ಪುಷ್ಪ’ ಮತ್ತು ‘ಪುಷ್ಪ 2’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಈಗ ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಸಿನೆಮಾ ಮಾಡಲು ಮುಂದಾಗಿದ್ದಾರೆ. ಈ ಸಲ ಅವರು ತಮಿಳು ಖ್ಯಾತ ನಿರ್ದೇಶಕ ಅಟ್ಲಿ ಜೊತೆಗೂಡಿ, ಹಾಲಿವುಡ್ ಶೈಲಿಯ ಸೈ-ಫೈ ಸಾಹಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ವಿಭಿನ್ನ ಲೋಕದಲ್ಲಿ ನಡೆಯುವ ಈ ಕಥೆಯಲ್ಲಿ ಅಲ್ಲು ಅರ್ಜುನ್ ಹೀರೋ ಆಗಿ, ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಪ್ರಾಜೆಕ್ಟ್‌ಗೆ ಮತ್ತೊಬ್ಬ ಸ್ಟಾರ್ ನಟನಾದ ವಿಜಯ್ ಸೇತುಪತಿ ಸೇರ್ಪಡೆಯಾಗಿದ್ದಾರೆ.
ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್ ಸೇತುಪತಿ, ಅಟ್ಲಿ ನಿರ್ದೇಶನದ ಹಿಂದಿನ ಬ್ಲಾಕ್‌ಬಸ್ಟರ್ ‘ಜವಾನ್’ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾದಲ್ಲಿಯೂ ಅವರು ನೆಗೆಟಿವ್ ಶೇಡ್ ಹೊಂದಿದ ಪಾತ್ರದಲ್ಲೇ ನಟಿಸುವ ಸಾಧ್ಯತೆ ಇದೆ. ಪಾತ್ರವು ಚಿಕ್ಕದಾದರೂ ಕಥೆಗೆ ದೊಡ್ಡ ತಿರುವು ನೀಡುವಂತದ್ದು ಎನ್ನಲಾಗಿದೆ.
ದೀಪಿಕಾ ಪಡುಕೋಣೆ ಈ ಸಿನಿಮಾಕ್ಕೆ ಬರೋಬ್ಬರಿ 100 ದಿನಗಳ ಕಾಲ್‌ಶೀಟ್ ನೀಡಿದ್ದಾರೆ. ಇಷ್ಟೊಂದು ದೀರ್ಘ ಕಾಲ್‌ಶೀಟ್ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗೂ ನೀಡಿರಲಿಲ್ಲ. ಇದರಿಂದಲೇ ಈ ಪ್ರಾಜೆಕ್ಟ್ ಮೇಲೆ ದೀಪಿಕಾಗೆ ಎಷ್ಟೊಂದು ನಿರೀಕ್ಷೆ ಇದೆ ಎಂಬುದು ಗೋಚರಿಸುತ್ತದೆ. ಜೊತೆಗೆ, ಇದು ಅವರ ಮೊದಲ ಸೈ-ಫೈ ಸಿನಿಮಾ ಆಗಿರುವುದರಿಂದ ಅವರು ವಿಶೇಷ ಉತ್ಸಾಹದಲ್ಲಿದ್ದಾರೆ.
ದೀಪಿಕಾ ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಕೂಡಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ವಿಶೇಷ ಜೀವಿಗಳು, ಅತ್ಯಾಧುನಿಕ ವಾಹನಗಳು, ಆಯುಧಗಳು ಸೇರಿದಂತೆ ಅಲಿಯನ್‌ಗಳ ವಿರುದ್ಧ ಮಾನವರ ಹೋರಾಟದ ರೋಮಾಂಚಕ ಕಥೆಯನ್ನು ಹೊಂದಿದೆ. ಇದಕ್ಕಾಗಿ ಹಾಲಿವುಡ್‌ನ ಪ್ರಮುಖ VFX ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಭರ್ಜರಿ ದೃಶ್ಯಾನುಭವವನ್ನು ಪ್ರೇಕ್ಷಕರಿಗೆ ನೀಡುವ ಭರವಸೆ ಇದೆ.
ಮತ್ತಷ್ಟು ಓದಿ: ಧರ್ಮಸ್ಥಳ ಪ್ರಕರಣ ಅನನ್ಯಾ ಭಟ್ ನಾಪತ್ತ ಎಸ್‌ಐಟಿ ತನಿಖೆ
ಸನ್ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ಈ ಪ್ರಾಜೆಕ್ಟ್‌ಗೆ ಭಾರೀ ಬಂಡವಾಳ ಹೂಡಿದ್ದು, ಸಂಗೀತವನ್ನು ಅನಿರುದ್ಧ್ ರವಿಚಂದ್ರನ್ ಸಂಯೋಜಿಸುತ್ತಿದ್ದಾರೆ.
ಮೂಲತಃ ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದರು. ಆದರೆ ಅವರು ಅದನ್ನು ಬಿಟ್ಟು ಅಟ್ಲಿಯ ಈ ಸೂಪರ್ ಹೀರೋ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪ್ರಾಜೆಕ್ಟ್ ಮುಗಿದ ಬಳಿಕ ಅಲ್ಲು ಅರ್ಜುನ್, ಪ್ರಶಾಂತ್ ನೀಲ್ ನಿರ್ದೇಶನದ ಮತ್ತೊಂದು ಬೃಹತ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.





