
ಬೆಳಗಾವಿ, ನ.18: ಇದೆಂತಹ ವಿಪರ್ಯಾಸ! ಅರಣ್ಯವಾಸಿ ಪ್ರಾಣಿಗಳಿಗೆ ಅತ್ಯಂತ ಸುರಕ್ಷಿತ ಎಂದು ಬಿಂಬಿಸಲಾಗುವ ಮೃಗಾಲಯದಲ್ಲಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೃಷ್ಣ ಮೃಗಗಳ ಮಾರಣಹೋಮ ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 31 ಕೃಷ್ಣ ಮೃಗಗಳು ಮೃತಪಟ್ಟಿವೆ.
ಇನ್ನೂ ಏಳು ಕೃಷ್ಣ ಮೃಗಗಳು ದಾರುಣ ಸ್ಥಿತಿಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಬೆಳಗಾವಿಯ ಮೃಗಾಲಯಕ್ಕೆ ಭೇಟಿಕೊಟ್ಟ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹಿರಿಯ ವೈರಾಲಜಿಸ್ಟ್ ಡಾ. ಚಂದ್ರಶೇಖರ್, ಪರಿಶೀಲನೆ ನಡೆಸಿದ್ದು, ಮರಣೋತ್ತರ ವರದಿಗಳು ಕೃಷ್ಣಮೃಗಗಳ ಸಾವಿಗೆ ರಕ್ತಸ್ರಾವದ ಸೆಪ್ಟಿಸೆಮಿಯಾ (HS) ಕಾರಣವಾಗಿದೆ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ರಕ್ತಸ್ರಾವದ ಗಾಯಗಳು ಇರುವುದು ಕಂಡು ಬಂದಿದೆ. ಇದು ಬ್ಯಾಕ್ಟೀರಿಯಾದ ಸೋಂಕನ್ನು ಸೂಚಿಸುತ್ತದೆ. ಕೃಷ್ಣಮೃಗಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಹಠಾತ್ ತಾಪಮಾನ ಕುಸಿತ ಅಥವಾ ಒತ್ತಡವು ಅವುಗಳ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಮರಣವನ್ನು ವೇಗಗೊಳಿಸುತ್ತದೆ ಎಂದು ತಿಳಿಸಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯವೇ ಕೃಷ್ಣಮೃಗಗಳ ಮಾರಣಹೋಮಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.





