ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ; ಗ್ರಾಹಕರಿಗೆ ಸಂತಸ, ಕೋಳಿ ಸಾಕಾಣಿಕೆದಾರರಲ್ಲಿ ಆತಂಕ!

0
28

ಬೆಂಗಳೂರು, ಮಾ.12: ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಮೊಟ್ಟೆ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಇದು ಸಂತಸದ ಸಂಗತಿಯಾಗಿದ್ದರೆ ಕೋಳಿ ಸಾಕಾಣಿಕೆದಾರರಲ್ಲಿ ಆತಂಕ ಮೂಡಿಸಿದೆ.

ಹಿಂದೆ ಒಂದು ಮೊಟ್ಟೆಯ ಬೆಲೆ ರೂ.7.06 ಇದ್ದು, ಇದೀಗ ಅದು ರೂ.4.60ಕ್ಕೆ ಇಳಿದಿದೆ. ರಫ್ತು ವ್ಯತ್ಯಯ, ಹಬ್ಬದ ಕಾಲದ ಬೇಡಿಕೆ ಕುಸಿತ ಹಾಗೂ ಬೇಸಿಗೆ ಪರಿಣಾಮದಿಂದ ಮೊಟ್ಟೆ ದರ ಇಳಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ಸುಮಾರು 15 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮೊಟ್ಟೆ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ತಿಳಿಸಿದೆ.

ಕರ್ನಾಟಕದಲ್ಲಿ ಪ್ರತಿದಿನ ಸುಮಾರು 2.2 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಈ ಮೊಟ್ಟೆಗಳ ಒಂದು ಭಾಗವನ್ನು ತಮಿಳುನಾಡಿನ ನಾಮಕ್ಕಲ್ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸಾಮಾನ್ಯವಾಗಿ ನಾಮಕ್ಕಲ್‌ನಿಂದ ದಿನಕ್ಕೆ ಸುಮಾರು 70 ಲಕ್ಷದಿಂದ 1 ಕೋಟಿ ಮೊಟ್ಟೆಗಳು ಗಲ್ಫ್ ದೇಶಗಳಿಗೆ ಸಾಗುತ್ತವೆ.

ಆದರೆ, ಯುದ್ಧ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆಗಳ ಸಂಗ್ರಹ ಹೆಚ್ಚಾಗಿದೆ. ಇದೂ ಕೂಡ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಹೊಸಪೇಟೆ ಮೊಟ್ಟೆ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ನಂತರದ ಸ್ಥಾನವನ್ನು ಮೈಸೂರು ಪಡೆದುಕೊಂಡಿದೆ.

ಇದರಿಂದ ಕೋಳಿ ಸಾಕಾಣಿಕೆದಾರರಿಗೆ ನಷ್ಟದ ಭೀತಿ ಹೆಚ್ಚಾಗಿದೆ. ಆಹಾರ ವೆಚ್ಚ, ಸಾರಿಗೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಮಯದಲ್ಲಿ ದರ ಇಳಿಕೆಯಾಗಿರುವುದು ಉತ್ಪಾದಕರಿಗೆ ದೊಡ್ಡ ಸವಾಲಾಗಿದೆ.

ಗಲ್ಫ್ ರಾಷ್ಟ್ರಗಳಿಗೆ ಮೊಟ್ಟೆ ರಫ್ತು ಮತ್ತೆ ಆರಂಭವಾದರೆ ಮಾರುಕಟ್ಟೆ ಸ್ಥಿರವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ರಾಜ್ಯದ ಮೊಟ್ಟೆ ಮಾರುಕಟ್ಟೆ ಅನಿಶ್ಚಿತತೆಯಲ್ಲೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಎನ್‌ಇಸಿಸಿಯ ಮಾರಾಟ ಪ್ರಚಾರ ಅಧಿಕಾರಿ ವಿ. ಶೇಷನಾರಾಯಣ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here