
ಅಮೃತಸರ, ಡಿ.27: ಇತ್ತೀಚೆಗೆ ಪವಿತ್ರ ನಗರವಾಗಿ ಘೋಷಿಸಲ್ಪಟ್ಟಿರುವ ಅಮೃತಸರದ ಗೋಲ್ಡನ್ ಟೆಂಪಲ್ ಸುತ್ತಮುತ್ತಲಿನ ʼಗೋಡೆಗಳ ನಗರʼ ಪ್ರದೇಶದಿಂದ ಮದ್ಯ, ಮಾಂಸ, ಮೊಟ್ಟೆ, ತಂಬಾಕು ಹಾಗೂ ಇತರೆ ಮಾಂಸಾಹಾರ ವಸ್ತುಗಳನ್ನು ಮಾರಾಟ ಮಾಡುವ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳನ್ನು ಮತ್ತು ಬೀದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಪಂಜಾಬ್ ಸರ್ಕಾರ ಆರಂಭಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಅಮೃತಸರ ಮಹಾನಗರ ಪಾಲಿಕೆ ಅಧಿಕಾರಿಗಳು, ಗೋಡೆಯೊಳಗಿನ ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 150ಕ್ಕೂ ಹೆಚ್ಚು ತಾತ್ಕಾಲಿಕ ಅಂಗಡಿಗಳು ಮತ್ತು ಸ್ಟಾಲ್‌ಗಳನ್ನುಸಮೀಕ್ಷೆ ಮೂಲಕ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಮಾಂಸದ ಅಂಗಡಿಗಳು, ಪಾನ್–ಬೀಡಿ ಗೂಡಂಗಡಿಗಳು ಹಾಗೂ ಬೇಯಿಸಿದ ಮೊಟ್ಟೆ ಮಾರಾಟ ಮಾಡುವ ಗಾಡಿಗಳು ಸೇರಿವೆ. ಇದಲ್ಲದೆ ಹಾಥಿ ಗೇಟ್, ಲೋಹಗಢ್ ಗೇಟ್, ಹಕೀಮನ್ ಗೇಟ್, ಭಗ್ತನವಾಲಾ ಗೇಟ್, ಗುರುವಾಲಿ ಗೇಟ್, ಗುರು ಬಜಾರ್, ಲಾಹೋರಿ ಗೇಟ್, ನಮಕ್ ಮಂಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಂಸಾಹಾರ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತಸರ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಸುರಿಂದರ್ ಸಿಂಗ್ ಮಾತನಾಡಿ, ಗೋಡೆಗಳ ನಗರ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಯಾವುದೇ ಪರವಾನಗಿ ನೀಡಿಲ್ಲ. ಆದರೂ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿತ್ತು ಎಂದು ಹೇಳಿದ್ದಾರೆ. ಈ ಸರ್ಕಾರದ ನಿರ್ಧಾರದಿಂದ ಗೋಲ್ಡನ್ ಟೆಂಪಲ್ ಸಮೀಪದ ಸುಮಾರು 650 ಹೋಟೆಲ್‌ಗಳು ಮತ್ತು ಗೆಸ್ಟ್‌ಹೌಸ್‌ಗಳಿಗೆ ಯಾವುದೇ ಪರಿಣಾಮವಾಗುವುದಿಲ್ಲ, ಏಕೆಂದರೆ ಅವು ಯಾತ್ರಿಕರಿಗೆ ಮದ್ಯ ಅಥವಾ ಮಾಂಸಾಹಾರ ಸೇವೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ ಅಲ್ಲಿನ ಬೀದಿ ಮಾಂಸ ವ್ಯಾಪಾರಿಗಳು ಈ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಹಾಗೂ ಪಕ್ಕದ ರಾಜ್ಯಗಳಿಗೆ ಮೀನು ಪೂರೈಕೆ ಮಾಡುವ ಮೀನು ವ್ಯಾಪಾರಕ್ಕೆ ಸುಮಾರು 60,000ಕ್ಕೂ ಹೆಚ್ಚು ಜನರು ಅವಲಂಬಿತರಾಗಿದ್ದಾರೆ. ಈ ವ್ಯಾಪಾರವು ಹಲವು ಕೋಟಿ ರೂಪಾಯಿಗಳ ವಹಿವಾಟು ಹೊಂದಿದ್ದು, ಮಾರುಕಟ್ಟೆಯನ್ನು ಸರಿಯಾದ ಪುನರ್ವಸತಿ ವ್ಯವಸ್ಥೆ ಇಲ್ಲದೆ ಸ್ಥಳಾಂತರಿಸಿದರೆ ವ್ಯಾಪಾರಿಗಳಿಗೆ ತಾತ್ಕಾಲಿಕ ನಿರುದ್ಯೋಗ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಜೊತೆಗೆ ಗೋಡೆಯೊಳಗಿನ ಮಾರುಕಟ್ಟೆಯಿಂದ ಮೀನು ಸರಬರಾಜಿನ ಮೇಲೆ ಅವಲಂಬಿಸಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಊಟದ ಅಂಗಡಿಗಳಿಗೆ ಸಹ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಪುನರ್ವಸತಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರ ಅಮೃತಸರದ ಕೆಲವು ಭಾಗಗಳಾದ ತಲವಂಡಿ ಸಾಬೋ ಮತ್ತು ಶ್ರೀ ಆನಂದಪುರ ಸಾಹಿಬ್ ಪ್ರದೇಶಗಳನ್ನು ಪವಿತ್ರ ನಗರಗಳು ಎಂದು ಘೋಷಿಸಿದೆ. ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಡಿಸೆಂಬರ್ 21ರಂದು ವಿಡಿಯೊ ಸಂದೇಶದ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದರು.
ಈ ಘೋಷಣೆಯ ಬಳಿಕ, ಈ ಪ್ರದೇಶಗಳಲ್ಲಿ ಮಾಂಸ, ಮೀನು, ಮದ್ಯ, ತಂಬಾಕು ಮತ್ತು ಇತರೆ ಮಾದಕ ವಸ್ತುಗಳ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.





