ಹೊಸದಿಲ್ಲಿ, ಏ.16: ಚುನಾವಣಾ ದಿನದಂದು ಮತಗಟ್ಟೆಗೆ ತೆರಳದೇ ಇರುವ ಮತದಾರರನ್ನು ಶಿಕ್ಷಿಸುವುದು ಅಥವಾ ಬಂಧಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ಮತದಾನವು ಮೂಲಭೂತ ಹಕ್ಕಾಗಿದ್ದು, ಅದನ್ನು ಬಳಸುವುದೇ ಅಥವಾ ಬಳಸದೇ ಇರುವುದೇ ಎಂಬ ನಿರ್ಧಾರ ಸಂಪೂರ್ಣವಾಗಿ ಮತದಾರರದ್ದೇ ಎಂದು ಹೇಳಿತು. ಪ್ರಜಾಪ್ರಭುತ್ವದಲ್ಲಿ ಮತ ಚಲಾಯಿಸುವುದು ನಿರೀಕ್ಷಿತವಾದರೂ, ಅದನ್ನು ಬಲವಂತಪಡಿಸುವುದು ನ್ಯಾಯಸಮ್ಮತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಚುನಾವಣಾ ದಿನದಂದು ಮತ ಚಲಾಯಿಸದವರ ಮೇಲೆ ದಂಡ ಅಥವಾ ನಿರ್ಬಂಧ ವಿಧಿಸುವಂತೆ ಕೋರಿ ಅಜಯ್ ಗೋಯೆಲ್ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿಜೆಐ ದಿನಗೂಲಿ ಹಾಗೂ ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ಉಲ್ಲೇಖಿಸಿ, “ತಮ್ಮ ದಿನನಿತ್ಯದ ಆದಾಯ ಕಳೆದುಕೊಂಡು ಮತ ಚಲಾಯಿಸಲು ತಮ್ಮ ಊರಿಗೆ ಹೋಗುವಂತೆ ಅವರನ್ನು ಬಲವಂತಗೊಳಿಸಬೇಕೇ? ಅವರು ಹೋಗದಿದ್ದರೆ ಅವರನ್ನು ಬಂಧಿಸಬೇಕೇ?” ಎಂದು ಪ್ರಶ್ನಿಸಿದರು. ಇಂತಹ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗುತ್ತವೆ ಎಂದು ಹೇಳಿದರು.
“ಎಲ್ಲರೂ ಮತ ಚಲಾಯಿಸಬೇಕು ಎಂಬ ನಿರೀಕ್ಷೆ ಸಹಜ. ಆದರೆ ಮತದಾನ ಮಾಡದಿರುವುದೂ ಅವರ ವೈಯಕ್ತಿಕ ಆಯ್ಕೆ” ಎಂದು ಪೀಠ ಸ್ಪಷ್ಟಪಡಿಸಿತು. ಮತದಾನದ ಬಗ್ಗೆ ಜಾಗೃತಿ ಮೂಡಿಸುವುದೇ ಸೂಕ್ತ ಮಾರ್ಗ, ಬಲವಂತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಅಂತಿಮವಾಗಿ ಅರ್ಜಿಯನ್ನು ವಿಲೇವಾರಿ ಮಾಡಿದ ಪೀಠ, ಈ ವಿಷಯದಲ್ಲಿ ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸೂಚನೆ ನೀಡಿತು.




