
ಬೆಂಗಳೂರು, ಏ.16: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳ ಬದಲು ಗ್ರೇಡ್ ನೀಡಲು ಹಾಗೂ ಒಟ್ಟು ಅಂಕಗಳನ್ನು 525ಕ್ಕೆ ಇಳಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತೀವ್ರ ಹಿನ್ನಡೆ ನೀಡಿದೆ. ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಕಡ್ಡಾಯವಾಗಿ ದಾಖಲಿಸಿ, ಅವುಗಳನ್ನು ಒಟ್ಟು ಫಲಿತಾಂಶದಲ್ಲಿ ಸೇರಿಸಬೇಕು ಎಂದು ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದೆ.
ಸರ್ಕಾರದ ಈ ನಿರ್ಧಾರದಿಂದ ಆತಂಕಕ್ಕೊಳಗಾಗಿದ್ದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೈಕೋರ್ಟ್ ತೀರ್ಪು ನಿರಾಳತೆಯನ್ನುಂಟು ಮಾಡಿದೆ. ತೃತೀಯ ಭಾಷೆಗೆ ಅಂಕಗಳ ಬದಲಿಗೆ ಎ, ಬಿ, ಸಿ ಎಂಬ ಗ್ರೇಡ್ ನೀಡುವ ಕ್ರಮವನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್ ನಾಯ್ಕ್ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇಎಸ್ ಇಂದಿರೇಶ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ಸರ್ಕಾರದ ಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಹಾನಿಕಾರಕವಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಶಿಕ್ಷಣ ಹಕ್ಕು ಮತ್ತು ಪರೀಕ್ಷಾ ನಿಯಮಾವಳಿಗಳ ಪ್ರಕಾರ ಪ್ರತಿ ವಿಷಯದ ಅಂಕಗಳು ಪಾರದರ್ಶಕವಾಗಿರಬೇಕು. ತೃತೀಯ ಭಾಷೆಯನ್ನು ಕೇವಲ ಗ್ರೇಡ್‌ಗೆ ಸೀಮಿತಗೊಳಿಸುವುದು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅವಕಾಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಎಚ್ಚರಿಸಿದೆ.
ಈ ಹಿಂದೆ ಸರ್ಕಾರದ ನಿರ್ಧಾರಕ್ಕೆ ಶಿಕ್ಷಣ ತಜ್ಞರು, ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವು ಅಂಕಗಳ ವಿವಾದಕ್ಕೆ ಮಾತ್ರ ಸೀಮಿತವಾಗದೇ, ಭಾಷಾ ನೀತಿಯ ಕುರಿತ ಸಂಘರ್ಷವಾಗಿಯೂ ರೂಪುಗೊಂಡಿತ್ತು.
ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳ ಆಸಕ್ತಿ ಕುಂಠಿತವಾಗುವ ಸಾಧ್ಯತೆ ಇದೆ. ಜೊತೆಗೆ, ಭವಿಷ್ಯದ ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಇದೀಗ ಹೈಕೋರ್ಟ್ ಆದೇಶದಿಂದ ಸರ್ಕಾರದ ಈ ವಿವಾದಾತ್ಮಕ ನಿರ್ಧಾರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.



