ಕುಡಿತ- ಗುಟ್ಕಾ ಸೇವೆನೆಗೆ ಬ್ರೇಕ್; ಕೊಪ್ಪಳದ ಈ ಗ್ರಾಮದಲ್ಲಿ ಕಠಿಣ ನಿಯಮ‌ ಜಾರಿ!

0
11
Advertisement

ಕೊಪ್ಪಳ, ಜ.11: ಮದ್ಯಪಾನ, ಮಾದಕ ವಸ್ತು, ಜೂಜು ಹಾಗೂ ತಂಬಾಕು ವ್ಯಸನಗಳಿಂದ ಗ್ರಾಮವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಒಂದು ಗ್ರಾಮದಲ್ಲಿ ಗ್ರಾಮಸ್ಥರು ಕಠಿಣ ತೀರ್ಮಾನ ಕೈಗೊಂಡಿದ್ದಾರೆ. ವ್ಯಸನಗಳಲ್ಲಿ ತೊಡಗಿರುವವರ ಮೇಲೆ ದೈಹಿಕ ಶಿಕ್ಷೆ ಜೊತೆಗೆ ಭಾರೀ ದಂಡ ವಿಧಿಸುವ ಮೂಲಕ ದುಶೀಲಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.

ಇತ್ತೀಚೆಗೆ ಕುಂಟೋಜಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ಗ್ರಾಮಸಭೆಯಲ್ಲಿ, ಮದ್ಯ ಮಾರಾಟ ಅಥವಾ ಸೇವನೆ, ಗುಟ್ಕಾ ಸೇವನೆ ಹಾಗೂ ಮಟ್ಕಾ ಜೂಜಿನಲ್ಲಿ ತೊಡಗಿರುವವರನ್ನು ಮೊದಲು ಸಾರ್ವಜನಿಕವಾಗಿ ಥಳಿಸಿ, ನಂತರ ರೂ.25 ಸಾವಿರ ದಂಡ ವಿಧಿಸಬೇಕೆಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ವ್ಯಸನಗಳಿಂದ ಉಂಟಾಗುತ್ತಿರುವ ಕುಟುಂಬ ಕಲಹ, ಆರ್ಥಿಕ ಸಂಕಷ್ಟ, ಸಾಲದ ಬಾಧೆ ಹಾಗೂ ಯುವ ಪೀಳಿಗೆಯ ಭವಿಷ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತು ಗ್ರಾಮಸ್ಥರು ಗಂಭೀರ ಚರ್ಚೆ ನಡೆಸಿದರು. ವ್ಯಸನಗಳು ಕುಟುಂಬಗಳ ಶಾಂತಿ ಹಾಗೂ ಗ್ರಾಮದ ವಾತಾವರಣಕ್ಕೆ ಹಾನಿ ಮಾಡುತ್ತಿವೆ ಎಂಬ ನಿರ್ಣಯಕ್ಕೆ ಸಭೆ ಬಂದಿತು.

ಇದೇ ಮಾದರಿಯ ನಿಯಮಗಳನ್ನು ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಇಂದ್ರವೆಲ್ಲಿ ತಾಲ್ಲೂಕಿನ ಆದಿವಾಸಿ ಗ್ರಾಮಗಳು 2018ರಿಂದ ಜಾರಿಗೆ ತಂದಿದ್ದು, ಅಲ್ಲಿ ಮದ್ಯಾಸಕ್ತಿಯಿಂದ ಉಂಟಾಗುತ್ತಿದ್ದ ಗಲಾಟೆ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಕಡಿವಾಣ ಬಿದ್ದಿದೆ ಎಂಬ ಉದಾಹರಣೆಯನ್ನು ಗ್ರಾಮಸ್ಥರು ಉಲ್ಲೇಖಿಸಿದರು. ಈ ಹಿನ್ನೆಲೆ ಕುಂಟೋಜಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲು ನಿರ್ಧರಿಸಲಾಯಿತು.

ಈ ಕುರಿತು ಮಾತನಾಡಿದ ಕೊಪ್ಪಳದ ನಿವಾಸಿ ದೇವಪ್ಪ ಕಾಮಲಾಪುರ, “ಗ್ರಾಮಸ್ಥರು ತಾವು ವ್ಯಸನಗಳಿಂದ ಅನುಭವಿಸಿದ ನೋವು-ನಷ್ಟಗಳನ್ನು ಸಭೆಯಲ್ಲಿ ಹಂಚಿಕೊಂಡರು. ದುಶೀಲಗಳು ಕುಟುಂಬ ಹಾಗೂ ಸಮಾಜಕ್ಕೆ ಮಾರಕ ಎಂಬ ಒಮ್ಮತ ಮೂಡಿತು. ಹೀಗಾಗಿ ಕಠಿಣ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದು ಇತರ ಗ್ರಾಮಗಳಿಗೆ ಮಾದರಿಯಾಗಬೇಕು,” ಎಂದರು.

ಗಂಗಾವತಿ ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಪ್ರತಿಕ್ರಿಯಿಸಿ, “ಈ ವಿಷಯದ ಬಗ್ಗೆ ಮಾಹಿತಿ ಬಂದಿದೆ. ಆದರೆ ಅಧಿಕೃತ ದಾಖಲೆಗಳು ಇನ್ನೂ ಬಂದಿಲ್ಲ. ಪರಿಶೀಲನೆ ನಡೆಸಲಾಗುವುದು,” ಎಂದು ತಿಳಿಸಿದರು.

Advertisement

LEAVE A REPLY

Please enter your comment!
Please enter your name here