ಕನಕದುರ್ಗಮ್ಮ ದೇವಸ್ಥಾನ ಸಮೀಪ ರೈಲ್ವೆ ಅಂಡರ್‌ಬ್ರಿಡ್ಜ್ ವಿಸ್ತರಣೆ: ನಗರ ಸಂಚಾರ ಸುಗಮಕ್ಕೆ ಸರ್ಕಾರದ ಕ್ರಮ

0
28
Advertisement

ಬಳ್ಳಾರಿ, ಡಿ.20: ಬಳ್ಳಾರಿ ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನ ಸಮೀಪ ರೈಲ್ವೆ ಅಂಡರ್ ಬ್ರಿಡ್ಜ್ ವಿಸ್ತರಣೆಯ ಪ್ರಸ್ತಾವನೆ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಕೋರ್ಟ್ ರಸ್ತೆಯಲ್ಲಿರುವ ಬಳ್ಳಾರಿ ಹಳೆಯ ನ್ಯಾಯಾಲಯದ ಆವರಣದಲ್ಲಿ ಸ್ಥಳಾವಕಾಶ ಒದಗಿಸುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಈ ಕುರಿತು ಕರ್ನಾಟಕ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು, ಹಳೆಯ ನ್ಯಾಯಾಲಯದ ಆವರಣವನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಬುಡಾ) ಹಸ್ತಾಂತರಿಸುವಂತೆ ಕೋರಿದೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾನ್ಯ ಸಚಿವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಕಾಮಗಾರಿ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ ಹಾಗೂ ಬುಡಾ ನಾಮನಿರ್ದೇಶಿತ ಸದಸ್ಯರಾದ ಶಿವಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮುಂದಿನ ಎರಡು ತಿಂಗಳೊಳಗೆ ಕನಕದುರ್ಗಮ್ಮ ದೇವಸ್ಥಾನದ ಸಮೀಪ ರೈಲ್ವೆ ಅಂಡರ್‌ಬ್ರಿಡ್ಜ್ ವಿಸ್ತರಣೆ ಕಾಮಗಾರಿ ಅಧಿಕೃತವಾಗಿ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಈ ಯೋಜನೆಯ ಹಿಂದೆ ಬಳ್ಳಾರಿ ನಗರ ಶಾಸಕರಾದ ನಾರಾ ಭರತ್ ರೆಡ್ಡಿ ಅವರ ಅಪಾರ ಶ್ರಮ ಅಡಗಿದ್ದು, ಬಳ್ಳಾರಿಯ ಸುಂದರೀಕರಣಕ್ಕೆ ಪಣ ತೊಟ್ಟಿರುವ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಗರದ ಸಂಚಾರ ಸಮಸ್ಯೆ ನಿವಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಸಹಕಾರ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

LEAVE A REPLY

Please enter your comment!
Please enter your name here