
ಜೂನಿಯರ್ ಎನ್‌ಟಿಆರ್ ‘ವಾರ್ 2’ ವಿವಾದ: ಟಿಡಿಪಿ ಶಾಸಕರ ಆಡಿಯೋ ಕ್ಲಿಪ್ ವೈರಲ್ ಬಳಿಕ ಕ್ಷಮೆಯಾಚನೆ
ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅಭಿನಯದ ವಾರ್ 2 ಸಿನಿಮಾ ಬಿಡುಗಡೆಯಾಗುವ ಮೊದಲುಲೇ ರಾಜಕೀಯ ಕುತಂತ್ರ ಮತ್ತು ವಿವಾದಗಳಲ್ಲಿ ಸಿಲುಕಿದೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಅನಂತಪುರ ಶಾಸಕ ದಗ್ಗುಬಾಟಿ ವೆಂಕಟೇಶ್ವರ ಪ್ರಸಾದ್ ಅವರದ್ದು ಎಂದು ಹೇಳಲಾಗುತ್ತಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಆಡಿಯೋದಲ್ಲಿ ಅವರು ತಮ್ಮ ಬೆಂಬಲಿಗರಿಗೆ ‘ಜೂನಿಯರ್ ಎನ್‌ಟಿಆರ್ ನಟಿಸಿರುವ ಸಿನಿಮಾವನ್ನು ಬಹಿಷ್ಕರಿಸಬೇಕು’ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆಡಿಯೋ ಕ್ಲಿಪ್ ವೈರಲ್ ಅಭಿಮಾನಿಗಳ ಆಕ್ರೋಶ
ವೈರಲ್ ಆದ ಆಡಿಯೋದಲ್ಲಿ ದಗ್ಗುಬಾಟಿ ಪ್ರಸಾದ್ ಅವರು “ಟಿಡಿಪಿಯಿಂದ ದೂರವಾಗಿರುವ ಎನ್‌ಟಿಆರ್ ಸಿನಿಮಾ ನೋಡಬೇಕೇ?” ಎಂದು ಪ್ರಶ್ನಿಸಿರುವುದಾಗಿ ಕೇಳಿಬರುತ್ತದೆ. ಅಲ್ಲದೆ, ಜೂನಿಯರ್ ಎನ್‌ಟಿಆರ್ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಈ ಆಡಿಯೋ ಕ್ಲಿಪ್‌ನಲ್ಲಿ ಇರುವ ಧ್ವನಿ ಶಾಸಕರದ್ದೇ ಎಂಬ ಶಂಕೆಯಿಂದ, ಜೂನಿಯರ್ ಎನ್‌ಟಿಆರ್ ಅಭಿಮಾನಿಗಳಲ್ಲಿ ಭಾರೀ ಆಕ್ರೋಶ ಉಂಟಾಗಿದೆ.
ಅಭಿಮಾನಿಗಳ ಪ್ರತಿಭಟನೆ
ವೈರಲ್ ಕ್ಲಿಪ್ ನಂತರ ಅಭಿಮಾನಿಗಳು ಶಾಸಕರ ಮನೆ ಮುಂದೆ ಭಾರೀ ಪ್ರತಿಭಟನೆ ನಡೆಸಿದರು. ಅಲ್ಲಿ ಕಟ್ಟಲಾಗಿದ್ದ ಶಾಸಕರ ಫ್ಲೆಕ್ಸ್‌ಗಳನ್ನು ನೆಲಕ್ಕೆ ಉರುಳಿಸಿದರು ಹಾಗೂ ಘೋಷಣೆ ಕೂಗಿದರು. “ನಂದಮೂರಿ ಅಭಿಮಾನಿಗಳೇ ಟಿಡಿಪಿಗೆ ಆಧಾರ” ಎಂದು ಅಭಿಮಾನಿಗಳು ಕೂಗಿದ ಘೋಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮತ್ತಷ್ಟು ಓದಿ: ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ವರ್ಗಾವಣೆ? ದಾಸನಿಗೆ ಹೆಚ್ಚಾದ ಆತಂಕ
ಶಾಸಕರ ಕ್ಷಮೆಯಾಚನೆ
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ದಗ್ಗುಬಾಟಿ ವೆಂಕಟೇಶ್ವರ ಪ್ರಸಾದ್ ಅವರು ಕೊನೆಗೆ ವಿಡಿಯೋ ಮೂಲಕ ಕ್ಷಮೆಯಾಚನೆ ಮಾಡಬೇಕಾಯಿತು. “ಆ ಆಡಿಯೋ ನನ್ನದ್ದೇ ಅಲ್ಲ. ಇದು ರಾಜಕೀಯ ಪಿತೂರಿ. ಆದರೂ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಅವರಿಗೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.
ಅವರು ತಮ್ಮನ್ನು ಸದಾ ನಂದಮೂರಿ ಕುಟುಂಬದ ಅಭಿಮಾನಿ ಎಂದೂ, ಬಾಲಕೃಷ್ಣ ಮತ್ತು ಎನ್‌ಟಿಆರ್ ಸಿನಿಮಾಗಳನ್ನು ಇಷ್ಟಪಡುವುದಾಗಿ ಹೇಳಿದ್ದಾರೆ. “ಈ ಆಡಿಯೋ ನಕಲಿ, ಇದು ಸಂಪೂರ್ಣ ಸುಳ್ಳು” ಎಂದು ಸ್ಪಷ್ಟನೆ ನೀಡಿದ್ದಾರೆ.
ವಿವಾದದ ಹಿನ್ನೆಲೆ
ಈ ವಿವಾದಕ್ಕೆ ಕಾರಣ ಜೂನಿಯರ್ ಎನ್‌ಟಿಆರ್ ಅವರು ವಾರ್ 2 ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನೀಡಿದ ಹೇಳಿಕೆ. “ಅಜ್ಜ ನಂದಮೂರಿ ತಾರಕ ರಾಮರಾವ್ ಅವರ ಆಶೀರ್ವಾದ ಇರುವುದರಿಂದ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಎನ್‌ಟಿಆರ್ ಹೇಳಿದ್ದರು. ಇದನ್ನು ಟಿಡಿಪಿ ಬೆಂಬಲಿಗರ ಒಂದು ವರ್ಗ ಪಕ್ಷಕ್ಕೆ ಎಚ್ಚರಿಕೆಯಂತೆ ತೆಗೆದುಕೊಂಡಿದ್ದು, ವಿವಾದಕ್ಕೆ ಕಾರಣವಾಯಿತು.





