ವಸತಿ ನಿಲಯದ ಶೌಚಾಲಯದಲ್ಲೇ 9ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಘಟನೆ!

0
15
gg

ಕಲಬುರಗಿ ಜಿಲ್ಲೆಯ ಶಹಪುರ ಪಟ್ಟಣದ ವಸತಿ ನಿಲಯವೊಂದರಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಬುಧವಾರ ಮಧ್ಯಾಹ್ನ 2:30ರ ಹೊತ್ತಿಗೆ ಶೌಚಾಲಯದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬೆಳವಣಿಗೆ ತಡವಾಗಿ ಬಹಿರಂಗಗೊಂಡಿದ್ದು, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಮಾಜದಲ್ಲಿ ಆಘಾತ ಮೂಡಿಸಿದೆ. ವಸತಿ ನಿಲಯದಲ್ಲಿ ಉಳಿಯುತ್ತಿರುವ ಇತರ ವಿದ್ಯಾರ್ಥಿನಿಯರ ಪಾಲಕರಲ್ಲಿಯೂ ಈ ಘಟನೆ ಆತಂಕ ಹೆಚ್ಚಿಸಿದೆ.

ಘಟನೆ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಸತಿ ನಿಲಯದ ಮೇಲ್ವಿಚಾರಕಿ ಗೀತಾ ಅವರು ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಶಾಲೆಯ ಪ್ರಾಂಶುಪಾಲ ಬಸ್ಸಮ್ಮ ಅವರೂ ಕೂಡ ವಿದ್ಯಾರ್ಥಿನಿಯ ಗರ್ಭಧಾರಣೆಯ ಲಕ್ಷಣಗಳು ತಮಗೆ ತಿಳಿದಿರಲಿಲ್ಲವೆಂದು ಹೇಳಿದ್ದಾರೆ. ವಿದ್ಯಾರ್ಥಿನಿಯ ಮದುವೆಯ ಸ್ಥಿತಿಯ ಬಗ್ಗೆ ಪೋಷಕರು ಯಾವುದೇ ಮಾಹಿತಿ ನೀಡಿರಲಿಲ್ಲವೆಂದು ಅವರು ತಿಳಿಸಿದ್ದಾರೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಅವರು ಈ ಘಟನೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ 10 ತಾಲೂಕುಗಳ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ

ವಿದ್ಯಾರ್ಥಿನಿ ಗರ್ಭಧಾರಣೆಗೆ ಕಾರಣ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದ್ಯಾರ್ಥಿನಿ ಈ ಕುರಿತು ಮೌನವಾಗಿರುವುದಾಗಿ ವಸತಿ ನಿಲಯದ ಆಡಳಿತ ವರ್ಗ ಹೇಳಿದೆ. ಸಂಬಂಧಿಕರೇ ಕಾರಣವಾ, ನಿಲಯದ ಸಿಬ್ಬಂದಿಯೇ ಕಾರಣವಾ ಅಥವಾ ಹೊರಗಿನವರೇ ಕಾರಣವಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಬಯಲಿಗೆಳೆದು ಪೋಷಕರಲ್ಲಿ ಗಂಭೀರ ಆತಂಕ ಮೂಡಿಸಿದೆ.

Advertisement

LEAVE A REPLY

Please enter your comment!
Please enter your name here