
ದುಬೈ, ಮಾ.11: ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬುಧವಾರ ಸ್ಫೋಟ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದರೂ ವಿಮಾನ ಸಂಚಾರ ಎಂದಿನಂತೆ ಮುಂದುವರೆದಿದೆ ಎಂದು ದುಬೈ ಸರ್ಕಾರ ತಿಳಿಸಿದೆ.
ವಿಮಾನ ನಿಲ್ದಾಣದ ಸಮೀಪ ಎರಡು ಡ್ರೋನ್‌ಗಳು ಬಿದ್ದಿದ್ದು, ಘಟನೆಯಲ್ಲಿ ಘಾನಾದ ಇಬ್ಬರು ಪ್ರಜೆಗಳು ಹಾಗೂ ಒಬ್ಬ ಬಾಂಗ್ಲಾದೇಶಿ ಪ್ರಜೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಬ್ಬ ಭಾರತೀಯ ಪ್ರಜೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಘಟನೆ ನಡೆದಿದ್ದರೂ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಮತ್ತು ಕಾರ್ಯಾಚರಣೆಗಳು ಸಾಮಾನ್ಯ ರೀತಿಯಲ್ಲೇ ಮುಂದುವರಿದಿವೆ ಎಂದು ಸರ್ಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೇ ತಮ್ಮ ಪ್ರಮುಖ ಗುರಿಗಳಾಗಿವೆ ಎಂದು ಇರಾನಿನ ಜಂಟಿ ಮಿಲಿಟರಿ ಕಮಾಂಡ್ ಬುಧವಾರ ಹೇಳಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಟೆಹ್ರಾನ್‌ನಲ್ಲಿರುವ ಬ್ಯಾಂಕಿನ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳ ನಂತರ ಇರಾನ್ ಗಲ್ಫ್ ರಾಷ್ಟ್ರಗಳ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದೆ.
ಇರಾನ್ ನೀಡಿರುವ ಈ ಬೆದರಿಕೆ ವಿಶೇಷವಾಗಿ ದುಬೈಗೆ ಆತಂಕವನ್ನು ಉಂಟುಮಾಡಿದೆ. ಏಕೆಂದರೆ ದುಬೈ ಅನೇಕ ಅಂತರರಾಷ್ಟ್ರೀಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಪ್ರಮುಖ ಕೇಂದ್ರವಾಗಿದೆ.
ಇದರ ಮಧ್ಯೆ ಇರಾನ್ ಸಮೀಪದ ಹಾರ್ಮುಜ್ ಜಲಸಂಧಿಯ ಬಳಿ ಬುಧವಾರ ಅಪರಿಚಿತ ಕ್ಷಿಪಣಿಯೊಂದು ಸರಕು ಹಡಗಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಳಿಕ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಇನ್ನೊಂದೆಡೆ ಯುಎಇ ಕರಾವಳಿಯ ಬಳಿ ಗುರುತಿಸಲಾಗದ ಮತ್ತೊಂದು ಕ್ಷಿಪಣಿ ದಾಳಿ ಎರಡನೇ ಕಂಟೇನರ್ ಹಡಗಿಗೆ ನಡೆದಿರುವುದಾಗಿ ವರದಿಯಾಗಿದೆ.





