ಕದಿರೇನಹಳ್ಳಿಯಲ್ಲಿ ಭೀಮೋತ್ಸವ; ಕೆಆರ್‌ಎಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

0
5

ಬೆಂಗಳೂರು, ಏ.14: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ನಗರದ ಕದಿರೇನಹಳ್ಳಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ವತಿಯಿಂದ ವೈಭವದ ‘ಭೀಮೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬೈಕ್ ರ್ಯಾಲಿಗೆ ಚಾಲನೆ

ಕದಿರೇನಹಳ್ಳಿ ಪಾರ್ಕ್‌ನಿಂದ ಆರಂಭವಾದ ಬೈಕ್ ರ್ಯಾಲಿಗೆ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಚಾಲನೆ ನೀಡಿದರು. ಸಾರಕ್ಕಿ, ಜಯನಗರ, ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿ ಹಾಗೂ ಯಾರಬ್ ನಗರ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ಸಂಚರಿಸಿದ ರ್ಯಾಲಿ ಬಳಿಕ ಕಾರ್ಯಕ್ರಮದ ವೇದಿಕೆಯನ್ನು ತಲುಪಿತು.

ಕದಿರೇನಹಳ್ಳಿಯ ಅಂಬೇಡ್ಕರ್ ಪ್ರತಿಮೆಗೆ ಪಕ್ಷದ ರಾಜ್ಯಾಧ್ಯಕ್ಷರಾದ ದೀಪಕ್ ಸಿ.ಎನ್. ಹಾಗೂ ರಾಜ್ಯ ಎಸ್.ಸಿ/ಎಸ್.ಟಿ ಘಟಕದ ಅಧ್ಯಕ್ಷರಾದ ಪ.ಯ. ಗಣೇಶ್ ಅವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ವಿಶೇಷ ಚೇತನರಿಗೆ ವೀಲ್‌ಚೇರ್‌ಗಳನ್ನು ವಿತರಿಸಲಾಯಿತು. ಜೊತೆಗೆ 50ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್. ಅವರು, “ಸಮಾನತೆಯ ಬಗ್ಗೆ ಮಾತನಾಡುವ ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ವಿಫಲವಾಗಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇಂತಹ ಅನ್ಯಾಯಗಳ ವಿರುದ್ಧ ಕೆಆರ್‌ಎಸ್ ಹೋರಾಟ ಮುಂದುವರಿಸುತ್ತದೆ,” ಎಂದು ಆರೋಪಿಸಿದರು.

ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಮಾತನಾಡಿ, “ಜೆಸಿಬಿ ಪಕ್ಷಗಳು ಅಂಬೇಡ್ಕರ್ ಜಯಂತಿಯನ್ನು ರಾಜಕೀಯ ಲಾಭಕ್ಕಾಗಿ ನಾಟಕೀಯವಾಗಿ ಆಚರಿಸುತ್ತಿವೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸದ ಆಡಳಿತ ಜನರನ್ನು ಮೋಸಗೊಳಿಸುತ್ತಿದೆ,” ಎಂದು ಟೀಕಿಸಿದರು. ಕುಟುಂಬ ರಾಜಕಾರಣದ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ತತ್ವಗಳನ್ನು ಉಲ್ಲೇಖಿಸಿದ ಅವರು, ಸಮಾನತೆಯ ಸಮಾಜ ನಿರ್ಮಾಣವೇ ಪಕ್ಷದ ಗುರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಮಂಜುನಾಥ ಎಸ್., ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ಜಂಟಿ ಕಾರ್ಯದರ್ಶಿ ಎಲ್. ಜೀವನ್, ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿದಂತೆ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕೆಆರ್‌ಎಸ್ ಸೈನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here